ಕ್ಯಾಶ್ ಬ್ಯಾಕ್ ಸಿಗುತ್ತದೆಂದು ಮತ್ತಷ್ಟು ದುಡ್ಡು ಹಾಕಿ 3 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ
Sunday, February 20, 2022
ರಾಯಚೂರು: ಇತ್ತೀಚೆಗೆ ವಿವಿಧ ರೀತಿಯಲ್ಲಿ ಸೈಬರ್ ವಂಚಕರು ಅಮಾಯಕರನ್ನು ತಮ್ಮ ಬಲೆಗೆ ಬೀಳಿಸುತ್ತಿರುತ್ತಾರೆ. ಅಂತಹದ್ದರಲ್ಲಿ ಕ್ಯಾಶ್ ಬ್ಯಾಕ್ ಆಮಿಷವೂ ಒಂದು. ಒಂದೆರಡು ಬಾರಿ ಮಾಡುವ ವಹಿವಾಟಿಗೆ ಸ್ವಲ್ಪ ಸ್ವಲ್ಪ ಕ್ಯಾಶ್ ಬ್ಯಾಕ್ ಆಫರ್ ನೀಡಿ, ಅದರ ಚಟ ಹತ್ತಿಸಿ, ಕ್ರಮೇಣ ಲಕ್ಷ ಲಕ್ಷ ರೂ. ಪಂಗನಾಮ ಹಾಕುವ ಹಲವಾರು ಮೋಸದ ಕಂಪೆನಿಗಳು ಹುಟ್ಟಿಕೊಂಡಿವೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ವಿದ್ಯಾರ್ಥಿಯೊಬ್ಬ ಕ್ಯಾಶ್ ಬ್ಯಾಕ್ ಆಮಿಷಕ್ಕೆ ಒಳಗಾಗಿ 3 ಲಕ್ಷ ರೂ. ಹಣ ಕಳೆದುಕೊಂಡಿದ್ದಾನೆ. ಇದೀಗ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಶ್ರೀಧರ್ ಪಾಟೀಲ್ ಎಂಬ ವಿದ್ಯಾರ್ಥಿ ಮೋಸ ಹೋದಾತ.
ಶ್ರೀಧರ್ ಪಾಟೀಲ್ ಪಾರ್ಟ್ ಟೈಂ ಕೆಲಸವೊಂದನ್ನು ಹುಡುಕುತ್ತಿದ್ದ. ಈ ನಡುವೆ ಮೊಬೈಲ್ ಗೆ ಬಂದ ಲಿಂಕ್ ಓಪನ್ ಮಾಡಿದಾಗ ಪ್ರಾಡಕ್ಟ್ ಖರೀದಿಗೆ ಆಫರ್ ಬಂದಿದೆ. 88 ಸಾವಿರ ರೂ., 69 ಸಾವಿರ ರೂ.ಗೆ 2 ವಸ್ತುಗಳನ್ನು ಖರೀದಿಸಿದ್ದಾನೆ. ಆಗ ಕ್ಯಾಶ್ ಬ್ಯಾಕ್ ಸಿಕ್ಕಿದೆ.
ಇದರಿಂದ ಮತ್ತಷ್ಟು ಉತ್ತೇಜಿತನಾದ ಶ್ರೀಧರ್ ಪಾಟೀಲ್ ಸ್ನೇಹಿತರ ಬಳಿ ಸಾಲ ಮಾಡಿ 3,78,600 ರೂ. ಹಣ ಹಾಕಿ ತನಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾನೆ. ಆಗ ಕ್ಯಾಶ್ ಬ್ಯಾಕ್ ಬಂದಿರಲಿಲ್ಲ. ಬದಲಿಗೆ ಇನ್ನಷ್ಟು ದುಡ್ಡು ಹಾಕಿ, ಮತ್ತಷ್ಟು ವಸ್ತು ಖರೀದಿಸಿದ್ದಾನೆ ಕ್ಯಾಶ್ ಬ್ಯಾಕ‌್ ಸಿಗುತ್ತದೆ ಎಂಬ ಮೆಸೇಜ್ ಬಂದಿದೆ. ಶ್ರೀಧರ್ ಬಳಿ ಆ ಕ್ಷಣದಲ್ಲಿ ಹಣವಿಲ್ಲದ್ದರಿಂದ ಮತ್ತೆ ಪ್ರಾಡಕ್ಟ್ ಖರೀದಿ ಮಾಡುವ ಉಸಾಬರಿಗೆ ಹೋಗಿರಲಿಲ್ಲ. ಆದರೆ ಕ್ಯಾಶ್ ಬ್ಯಾಕ್ ದುಡ್ಡು ವಾಪಸ್ ಬರಲೇ ಇಲ್ಲ.
ಆಗಲೇ ಆತನಿಗೆ ತಾನು ಮೋಸ ಹೋಗಿರೋದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.