ಗೂಗಲ್ ನಲ್ಲಿ ಸಿಗುವ ನಂಬರ್ ನಂಬಿ ಮೋಸ ಹೋಗಬೇಡಿ... ಮಂಗಳೂರಿನ ವ್ಯಕ್ತಿ ಕಳೆದುಕೊಂಡದ್ದು 48 ಸಾವಿರ ರೂ!
Tuesday, February 22, 2022
ಮಂಗಳೂರು: ಗೂಗಲ್ ನಲ್ಲಿರುವ ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಿ ಮಂಗಳೂರಿನ ವ್ಯಕ್ತಿಯೋರ್ವರು 48,354 ರೂ. ನಗದು ಕಳೆದುಕೊಂಡಿದ್ದಾರೆ. ಇದೀಗ ಸಂತ್ರಸ್ತ ವ್ಯಕ್ತಿ ನ್ಯಾಯಕ್ಕಾಗಿ ಸೆನ್ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ಹಣ ಕಳೆದುಕೊಂಡ ವ್ಯಕ್ತಿ ಫ್ಲಿಪ್ ಕಾರ್ಟ್ ಆ್ಯಪ್ ನಲ್ಲಿ ಕೀಬಂಚ್ ಅನ್ನು ಆರ್ಡರ್ ಮಾಡಿದ್ದರು. ಆದರೆ 12 ದಿವಸಗಳಾದರು ಅವರು ಆರ್ಡರ್ ಮಾಡಿರುವ ವಸ್ತು ಬರಲೇ ಇಲ್ಲ. ಆದ್ದರಿಂದ ಅವರು ಪಾವತಿಸಿರುವ ಹಣದ ರೀಫಂಡ್ ಗಾಗಿ ಗೂಗಲ್ ನಲ್ಲಿ ಫ್ಲಿಪ್ ಕಾರ್ಟ್ ಹೆಲ್ಪ್ ಲೈನ್ ದೂರವಾಣಿ ಸಂಖ್ಯೆಯನ್ನು ಹುಡುಕಾಡಿದ್ದಾರೆ. ಆ ಬಳಿಕ ಅದರಲ್ಲಿದ್ದ 8609560494 ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಮೊಬೈಲ್ ರಿಂಗ್ ಆಗಿ ಸ್ಥಗಿತಗೊಂಡಿತ್ತು. ತಕ್ಷಣ ಅತ್ತಕಡೆಯಿಂದ ಅದೇ ಸಂಖ್ಯೆಯಿಂದ ಮತ್ತೆ ಕರೆ ಬಂದಿದೆ.
ಕರೆ ಮಾಡಿದಾತ ಹಿಂದಿ ಭಾಷೆಯಲ್ಲಿ ಮಾತನಾಡಿ, ತಮ್ಮ ಕೀಚದ ಆರ್ಡರ್ ಬರುವುದಿಲ್ಲ ಆದುದರಿಂದ ತಾವು ಅದರ ಹಣವನ್ನು ರೀಫಂಡ್ ಮಾಡುತ್ತೇವೆ ಅದಕ್ಕಾಗಿ ನೀವು ಎನೀ ಡೆಸ್ಕ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ ಎಂದು ತಿಳಿಸಿದ್ದಾನೆ. ಅದರಂತೆ ಆ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ ವೆಬ್ ಪೇಜ್ ಒಂದು ಓಪನ್ ಆಗಿದೆ. ಅದರಲ್ಲಿದ್ದ ಫ್ಲಿಪ್ ಕಾರ್ಟ್ ಆ್ಯಪ್ ಅನ್ನು ಓಪನ್ ಮಾಡಿ ಅದರಲ್ಲಿ ತನ್ನ ಡೆಬಿಟ್ ಕಾರ್ಡ್ ಸಂಖ್ಯೆ ಹಾಗೂ ಸಿವಿವಿ ಸಂಖ್ಯೆಯನ್ನು ಆತ ಹೇಳಿದಂತೆ ನಮೂದಿಸಿದ್ದಾರೆ.
ಆ ತಕ್ಷಣ ಇವರ ಮಂಗಳೂರು ನಗರದ ಪಾಂಡೇಶ್ವರ ಯೂನಿಯನ್ ಬ್ಯಾಂಕ್ ನಲ್ಲಿ ಖಾತೆಯಿಂದ 20,354 ರೂ.3000 ರೂ. ಹೀಗೆ ಹಂತ ಹಂತವಾಗಿ ಒಟ್ಟು ರೂ.48,354/- ಕಡಿತವಾಗಿದೆ. ಈ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿರುವುದಾಗಿದೆ. ಆದ್ದರಿಂದ ತನ್ನನ್ನು ವಂಚಿಸಿರುವ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.