ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಲು ಹೊರಟ ರೈತನೀಗ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ವಾರ್ಷಿಕ 7ಲಕ್ಷ ರೂ. ಆದಾಯ: ಆತನ ಯಶೋಗಾಥೆ ವಿವಿಗೆ ಪಠ್ಯ
Friday, February 11, 2022
ಬೆಂಗಳೂರು: ವಾಹಿನಿಯೊಂದರಲ್ಲಿ ಬಿತ್ತರವಾಗುತ್ತಿದ್ದ ಸಮಗ್ರ ಕೃಷಿ ಪದ್ಧತಿಯನ್ನು ವೀಕ್ಷಿಸಿ, ಅದರಿಂದ ಪ್ರೇರಿತಗೊಂಡು ಆತ್ಮಹತ್ಯೆಯಂತಹ ನಿರ್ಧಾರವನ್ನು ಕೈಬಿಟ್ಟು ಯಶಸ್ಸು ಸಾಧಿಸಿರುವ ಶಿಕಾರಿಪುರ ತಾಲೂಕು ಸಾಸರವಳ್ಳಿಯ ದುರ್ಗಪ್ಪ ಅಂಗಡಿ ಇದೀಗ ರೈತರಿಗೇ ಮಾದರಿಯಾಗಿದ್ದಾರೆ. ಇವರ ಕೃಷಿ ಪ್ರೀತಿಯನ್ನು ಕಂಡ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಕೆ.ಎ.ದಯಾನಂದ್ ಅವರು ದುರ್ಗಪ್ಪ ಅಂಗಡಿ ಪುಸ್ತಕವನ್ನೇ ಬರೆದಿದ್ದರು. ಇದೀಗ ಇದೇ ಪುಸ್ತಕದ ಕೆಲ ಭಾಗಗಳು ಮಂಗಳೂರು ವಿಶ್ವವಿದ್ಯಾನಿಲಯ ವಿಜ್ಞಾನ ಗಂಗೋತ್ರಿ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ‘ಕೃಷಿ, ಋಷಿ, ಖುಷಿ’ ಹೆಸರಿನಲ್ಲಿ ಪಠ್ಯವಾಗಿಸಿದೆ.
13 ಲಕ್ಷ ರೂ. ಸಾಲವನ್ನು ಮಾಡಿದ್ದ ದುರ್ಗಪ್ಪ ಅಂಗಡಿ ಅದರಿಂದ ಹೊರಬರಲಾಗದೆ 2009ರಲ್ಲಿ ಆತ್ಮಹತ್ಯೆಗೆ ಶರಣಾಗಲು ಹೊರಟಿದ್ದರು. ಇದೀಗ ವಾರ್ಷಿಕ 6-7 ಲಕ್ಷ ರೂ. ಆದಾಯ ಗಳಿಸುತ್ತಾರೆ. ಅಲ್ಲದೆ ರೈತರಿಗೆ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿ ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದಾರೆ. ಇವರಿಂದ ಸ್ಪೂರ್ತಿ ಪಡೆದ ಅದೆಷ್ಟೋ ರೈತರು ಶಿಕಾರಿಪುರ, ಸೊರಬ ತಾಲೂಕಿನ ಗಡಿ ಭಾಗದ ಜಮೀನುಗಳಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
ದುರ್ಗಪ್ಪ ಅಂಗಡಿ ಯಾವುದೇ ಆಳು-ಕೂಲಿಕಾರರ ಸಹಾಯ ಪಡೆಯದೆ, ಒಂದೇ ಒಂದು ಪೈಸೆ ಕೂಲಿಯನ್ನು ನೀಡದೆ ಪತ್ನಿಯೊಂದಿಗೆ ಮುಂಜಾನೆಯಿಂದ ಸಂಜೆಯವರೆಗೆ ಜಮೀನಿನಲ್ಲಿ ದುಡಿಯುತ್ತಾರೆ. ಜೇನು, ಮೀನು, ಕೋಳಿ, ಕುರಿ, ಹಸು, ನಾಯಿ ಸಾಕಣೆ, ವಿವಿಧ ತರಕಾರಿ, ಅಡಿಕೆ, ಹಣ್ಣು ಬೆಳೆಯುತ್ತಾರೆ. 2.25 ಎಕರೆ ಜಮೀನಿನಲ್ಲಿ ರಾಸಾಯನಿಕ ಮುಕ್ತ ಸಾವಯವ ಪದ್ಧತಿ ಬಳಸಿ ಸಾಧನೆಗೈದಿದ್ದಾರೆ. ಜೀವಾಮೃತ, ಹಸಿಮೀನಿನ ಟಾನಿಕ್ ಸ್ಪ್ರೇ, ಸೊಪ್ಪನ್ನು ಕೊಳೆಸಿ ಗೊಬ್ಬರನ್ನಾಗಿಸಿ ಬಳಸುತ್ತಾರೆ. ವಿಶೇಷವೆಂದರೆ, ಯಾವುದೇ ಸಣ್ಣ ರಾಸಾಯನಿಕಗಳನ್ನು ಬಳಸುವುದಿಲ್ಲ. ಲಾಕ್ ಡೌನ್ ಸಮಯದಲ್ಲಿ ತಮ್ಮ ಉತ್ಪನ್ನಗಳು ಮಾರಾಟವಾಗದೆ ನಷ್ಟವಾಯಿತೆಂದು ಬೇಸರಿಸದೆ ತಾವೇ ಖುದ್ದಾಗಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ರಾಜ್ಯಮಟ್ಟದ ಡಾ.ವೀರೇಶ ದತ್ತಿ ಪ್ರಶಸ್ತಿ, ಕೃಷಿಕ ಸಮಾಜದಿಂದ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ 4 ರಾಜ್ಯಮಟ್ಟದ ಪ್ರಶಸ್ತಿಗಳು, ಜಿಲ್ಲಾ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ದುರ್ಗಪ್ಪ ಅಂಗಡಿಯರನ್ನು ಅರಸಿ ಬಂದಿವೆ. ಶಿವಮೊಗ್ಗ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ದುರ್ಗಪ್ಪ, ವಿದ್ಯಾರ್ಥಿಗಳಿಗೆ ಪಾಠ ಮಾಡುವುದಲ್ಲದೇ ಕೃಷಿ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.
ದುರ್ಗಪ್ಪ ಅಂಗಡಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೃಷಿ ಸಚಿವರು ತನ್ನನ್ನು ತಮ್ಮ ಕಚೇರಿಗೆ ಕರೆದು ಸಮಗ್ರ ಕೃಷಿ ಬಗ್ಗೆ ರ್ಚಚಿಸಿ, ಆತ್ಮಸ್ಥೈರ್ಯ ತುಂಬಿದ್ದು ಸಂತೋಷ ತಂದಿದೆ. ಸಮಗ್ರ ಕೃಷಿ ಬಗೆಗಿನ ಸಚಿವರ ಕಾಳಜಿ ಮತ್ತಷ್ಟು ಸ್ಪೂರ್ತಿ ತುಂಬಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಬಿ.ಸಿ.ಪಾಟೀಲರ ಕಾಳಜಿ ಸ್ವಾಗತಾರ್ಹ ಎಂದಿದ್ದಾರೆ.