
ಎಟಿಎಂ ಕಾರ್ಡ್ ಅವಧಿ ಮುಗಿದಿದೆ ಎಂದು ಮಹಿಳೆಯ ಖಾತೆಯಿಂದ 74 ಸಾವಿರ ರೂ. ಎಗರಿಸಿದ ಸೈಬರ್ ಖದೀಮ
Friday, February 4, 2022
ಚಿತ್ತೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಜನರನ್ನು ವಂಚನೆ ಮಾಡಿ ಸರ್ಕಾರಿ ಯೋಜನೆಗಳ ಹೆಸರಲ್ಲಿ ಕೆವೈಸಿ, ಬ್ಯಾಂಕ್ ಖಾತೆ ಮತ್ತು ಎಟಿಎಂ ವಿವರಗಳನ್ನು ಪಡೆಯುವ ಅವರ ಬ್ಯಾಂಕ್ ಖಾತೆಯಲ್ಲಿರುವ ದುಡ್ಡನ್ನು ಸೈಬರ್ ಖದೀಮರು ಎಗರಿಸುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಸೈಬರ್ ಖದೀಮರ ಮಾತಿಗೆ ಮರುಳಾಗುವ ಜನರು ಸ್ವಲ್ಪವೂ ಯೋಚನೆ ಮಾಡದೆ ಅವರು ಕೇಳುವ ವಿವರಗಳನ್ನೆಲ್ಲಾ ನೀಡಿ ಮೋಸ ಹೋಗುತ್ತಿದ್ದಾರೆ.
ಇದೇ ರೀತಿಯ ಪ್ರಕರಣವೊಂದು ಇತ್ತೀಚೆಗೆ ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೆದ್ದಪಂಜನಿ ವಲಯದ ನಾಗಿರೆಡ್ಡಿಪಲ್ಲಿ ಪಂಚಾಯತ್ ಚಲವರಿಪಲ್ಲಿ ಗ್ರಾಮದ ನಿವಾಸಿ ಮಂಜುಳಾ ವಂಚನೆಗೊಳಗಾದವರು. ಈಕೆ ರಾಯಲಪೇಟೆಯ ಇಂಡಿಯನ್ ಬ್ಯಾಂಕ್ನಲ್ಲಿ ಸೇವಿಂಗ್ಸ್ ಖಾತೆಯನ್ನು ಹೊಂದಿದ್ದಾರೆ.
ಸಂತ್ರಸ್ತೆಯ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಪತಿಯ ಮೊಬೈಲ್ ಸಂಖ್ಯೆಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ನಾನು ಬ್ಯಾಂಕ್ ಮ್ಯಾನೇಜರ್ ಮಾತನಾಡುತ್ತಿದ್ದೇನೆ ಎಂದು ಪರಿಚಯಿಸಿದ್ದಾನೆ. ಆತ ನಿಮ್ಮ ಎಟಿಎಂ ಕಾರ್ಡ್ ನ ಅವಧಿ ಮುಗಿದಿದೆ ಎಂದು ಹೇಳಿ, ಆಧಾರ್ ನಂಬರ್ ಮತ್ತು ಅಕೌಂಟ್ ನಂಬರ್ ಅಪ್ಡೇಟ್ ಮಾಡಬೇಕಿದೆ ಎಂದು ಕೇಳಿದ್ದಾನೆ. ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೆ ಅಪರಿಚಿತ ಕೇಳಿರುವ ಎಲ್ಲಾ ವಿವರಗಳನ್ನು ಮಹಿಳೆ ನೀಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ ಒಟಿಪಿ ನಂಬರ್ ಹೇಳುವಂತೆ ಕೇಳಿದ್ದಾನೆ. ಅದನ್ನು ಸಂತ್ರಸ್ತೆ ಹೇಳಿದ್ದಾಳೆ.
ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಬ್ಯಾಂಕ್ ಖಾತೆಯಿಂದ ಸೈಬರ್ ಖದೀಮ 74,571 ರೂ. ಹಣ ಎಗರಿಸಿದ್ದಾನೆ. ತಕ್ಷಣ ವಂಚನೆಗೊಳಗಾದ ಮಹಿಳೆಯ ಮೊಬೈಲ್ ಗೆ ಹಣ ಕಡಿತವಾಗಿರುವ ಸಂದೇಶ ಹೋಗಿದೆ. ಇದರಿಂದ ಗಾಬರಿಗೊಂಡ ಸಂತ್ರಸ್ತೆ ಬ್ಯಾಂಕ್ಗೆ ಹೋಗಿ ವಿಚಾರಣೆ ಮಾಡಿದಾಗ ಸೈಬರ್ ಖದೀಮನ ವಂಚನೆ ತಿಳಿದು ಬಂದಿದೆ. ತಕ್ಷಣ ಸೈಬರ್ ಠಾಣೆಯ ಮೆಟ್ಟಿಲೇರಿರುವ ಮಹಿಳೆ ಪೆದ್ದಪಂಜನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೊಬೈಲ್ ಸಂಖ್ಯೆಯ ಆಧಾರದ ಮೇಲೆ ಸೈಬರ್ ಸೈಬರ್ ಖದೀಮನ ಜಾಡನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.