ಹೆಣ್ಣು ಮಗು ಮಾರಾಟ ಮಾಡಿದ ತಾಯಿ ಸಹಿತ 9ಮಂದಿ ಅರೆಸ್ಟ್
Friday, February 18, 2022
ಚೆನ್ನೈ: ಮಕ್ಕಳ ಮಾರಾಟ ಜಾಲಗಳ ಬಗ್ಗೆ ಸಾಕಷ್ಟು ವರ್ಷಗಳಿಂದ ದೂರುಗಳು ಕೇಳಿ ಬರುತ್ತಲೇ ಇದೆ. ಮಕ್ಕಳನ್ನು ಅಪಹರಣ ಮಾಡಿ ಮಾರಾಟ ಮಾಡಲಾಗುತ್ತದೆ ಎಂಬ ವಿಚಾರ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ಈ ಪ್ರಕರಣದಲ್ಲಿ ಸ್ವಂತ ತಾಯಿಯೇ ಪುತ್ರಿಯನ್ನು ಮಾರಾಟ ಮಾಡಿದ್ದಾಳೆ. ಇದೀಗ ಪೊಲೀಸರು ತಾಯಿ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಪುಟ್ಟ ಮಗು ತಾಯಿ ಕಲೈಸೆಲ್ವಿ ಆಕೆಯ ಸಹಚರ ಕರುಪ್ಪುಸಾಮಿ, ಮಗುವನ್ನು ಖರೀದಿಸಿದ್ದ ದಂಪತಿ, ಏಜೆಂಟ್ಗಳಾದ ಮರಿಯಮ್ಮ, ಮಹೇಶ್ವರಿ ಹಾಗೂ ಇನ್ನು ಮೂವರು ಸೇರಿ 9 ಮಂದಿಯನ್ನು ಬಂಧಿಸಲಾಗಿದೆ.
ಸೇವಲ್ಪಟ್ಟಿ ಎಂಬಲ್ಲಿನ ನಿವಾಸಿ ಕಲೈಸೆಲ್ವಿ ತನ್ನ ಪತಿ ಮೃತಪಟ್ಟ ಬಳಿಕ ಕರುಪ್ಪುಸಾಮಿ ಎಂಬಾತನ ಜತೆಗಿದ್ದಳು. ಇವರು ತಮಿಳುನಾಡು ವಿರುಧುನಗರ ಜಿಲ್ಲೆಯ ಮಕ್ಕಳಿಲ್ಲದ ದಂಪತಿಗೆ ಒಂದು ವರ್ಷದ ಹೆಣ್ಣು ಮಗುವನ್ನು 2.3 ಲಕ್ಷ ರೂ.ಗೆ ಮಾರಿದ್ದರು.
ಆದರೆ ಬುಧವಾರ ರಾತ್ರಿ ವಿರುಧನಗರ ಚೈಲ್ಡ್ಲೈನ್ಗೆ ಮಗುವಿನ ಮಾರಾಟವಾದ ಬಗ್ಗೆ ಅನಾಮಧೇಯ ಕರೆಯೊಂದು ಬಂದಿದಿ. ಚೈಲ್ಡ್ಲೈನ್ಗೆ ಸಂಬಂಧಪಟ್ಟವರು ಕಲೈಸೆಲ್ವಿ ನೆಲೆಸಿರುವ ಪ್ರದೇಶಕ್ಕೆ ಹೋಗಿ ವಿಚಾರಿಸಿದಾಗ ಮಗು ಮಾರಾಟವಾಗಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮದುವೆ ದಳ್ಳಾಳಿಗಳ ರೂಪದಲ್ಲಿ ಹಲವಾರು ಏಜೆಂಟ್ಗಳು ಮಕ್ಕಳ ಮಾರಾಟದಲ್ಲಿ ತೊಡಗಿದ್ದು, ಇಂಥ ಪ್ರಕರಣಗಳು ಬಹಳಷ್ಟು ನಡೆಯುತ್ತಿದೆ ಎಂಬ ಶಂಕೆ ಮೂಡಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.