
ಮಂಗಳೂರು: ನಿಯಂತ್ರಣ ಕಳೆದುಕೊಂಡ ಕಾರು ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Friday, February 4, 2022
ಮಂಗಳೂರು: ನಿಯಂತ್ರಣ ಕಳೆದುಕೊಂಡು ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಚಾಲಕ ಗಾಯಗೊಂಡ ಘಟನೆ ಉರ್ವದ ಚಿಲಿಂಬಿ ಮಠದಕಣಿ ಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಅಪಘಾತ ನಡೆದಿರುವ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿವೇಕಾನಂದ ಶೆಣೈ (63) ಎಂಬವರು ಚಲಾಯಿಸುತ್ತಿದ್ದ ಕಾರಿನ ಬ್ರೇಕ್ ಪೆಡಲ್ ನ ಅಡಿಯಲ್ಲಿ ನೀರಿನ ಬಾಟಲೊಂದು ಸಿಲುಕಿ ಸ್ಟ್ರಕ್ ಆಗಿತ್ತು. ಪರಿಣಾಮ ಬ್ರೇಕ್ ಪೆಡಲ್ ವರ್ಕ್ ಆಗದೆ ಕಾರು ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ.
ಅಪಘಾತದ ಪರಿಣಾಮ ಕಾರು ವೇಗವಾಗಿ ಬಂದು ನಿಂತಿದ್ದ ದ್ವಿಚಕ್ರ ವಾಹನವೊಂದಕ್ಕೆ ಗುದ್ದಿದೆ. ಪರಿಣಾಮ ದ್ವಿಚಕ್ರ ಸವಾರನಿಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ 2 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನ ಜಖಂ ಆಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ಚಾಲಕ ವಿವೇಕಾನಂದ ಶೆಣೈ ಮೇಲೆ ಮಂಗಳೂರಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.