
ಮಂಗಳೂರು: ಶ್ರೀದೇವಿ ಕಾಲೇಜು ಬಳಿ ತಲವಾರು ದಾಂಧಲೆ: ಓರ್ವ ಆರೋಪಿ ವಶಕ್ಕೆ
Thursday, February 3, 2022
ಮಂಗಳೂರು: ನಗರದ ಬಲ್ಲಾಳ್ ಬಾಗ್ ನಲ್ಲಿರುವ ಶ್ರೀದೇವಿ ಕಾಲೇಜು ಬಳಿ ತಲ್ವಾರ್ ಹಿಡಿದು ದಾಂಧಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ವಿವೇಕನಗರ ನಿವಾಸಿ ವಿಶ್ವಾಸ್ (22) ಬಂಧಿತ ಆರೋಪಿ. ಬಂಧಿತನಿಂದ ಪೊಲೀಸರು ತಲ್ವಾರ್ ಅನ್ನು ವಶಕ್ಕೆ ಪಡೆದಿದ್ದಾರೆ.
ಫೆ.1ರಂದು ನಗರದ ಶ್ರೀದೇವಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ತಂಡದ ನಡುವೆ ಕ್ಲುಲ್ಲಕ ಕಾರಣಕ್ಕೆ ಜಗಳ, ವಾಗ್ವಾದ ನಡೆದಿತ್ತು. ಯುವಕರ ತಂಡದ ಸ್ಕೂಟರೊಂದು ಕೇರಳದ ವಿದ್ಯಾರ್ಥಿಗಳಿಗೆ ಗುದ್ದಿದ ಹಿನ್ನೆಲೆ ಈ ದಾಂಧಲೆ ನಡೆದಿತ್ತು.
ಇದನ್ನೇ ನೆಪವಾಗಿರಿಸಿಕೊಂಡು ಯುವಕರ ತಂಡ ತಲ್ವಾರ್ ಹಿಡಿದು ಕ್ಯಾಂಪಸ್ ಪ್ರವೇಶಿಸಿತ್ತು. ಈ ದೃಶ್ಯ ವಿದ್ಯಾರ್ಥಿಗಳ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.