
ಕೇರಳ: ಜೀವಶಾಸ್ತ್ರ ಬೋಧನೆಯ ವೇಳೆ 'ಮುಟ್ಟಿನ' ಬಾಲಕಿ ಗರ್ಭಿಣಿಯಾದ ಗುಟ್ಟು ರಟ್ಟು; ಆರೋಪಿಯ ಬಂಧನ
Saturday, February 26, 2022
ಕೊಚ್ಚಿ: ಮದರಸಾದಲ್ಲಿ ಸಹಾಯಕನಾಗಿದ್ದ ಯುವಕನೋರ್ವನು ಮದರಸಾ ತರಗತಿಗೆ ಬರುತ್ತಿದ್ದ 13 ವರ್ಷದ ಬಾಲಕಿಯನ್ನು ಗರ್ಭವತಿಯನ್ನಾಗಿಸಿದ ಘಟನೆಯೊಂದು ಕೇರಳದ ಥಡಿಯಿಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಶರಫುದ್ದೀನ್(27) ಬಂಧಿತ ಆರೋಪಿ.
ಶರಫುದ್ದೀನ್ ಮದರಸಾದಲ್ಲಿ ಶಿಕ್ಷಕರಿಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈತ ಮದರಸಾ ಶಾಲೆಗೆ ಬೇಗ ಬರುತ್ತಿದ್ದ ಹುಡುಗಿಯನ್ನು ಪುಸಲಾಯಿಸಿ, 2021ರ ನವೆಂಬರ್ನಿಂದ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿಯೀಗ 2 ತಿಂಗಳ ಗರ್ಭಿಣಿಯಾಗಿದ್ದಾಳೆ. ಸಂತ್ರಸ್ತೆಯನ್ನು ಮದರಸಾ ತರಗತಿಯ ಕೊಠಡಿಯೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮದರಸಾದಲ್ಲಿ ಜೀವಶಾಸ್ತ್ರ ಬೋಧಿಸುವ ಶಿಕ್ಷಕರೊಬ್ಬರು ಸೋಮವಾರ ತರಗತಿಯಲ್ಲಿ ಹುಡುಗಿಯರ ನಿಯಮಿತ ಋತುಚಕ್ರದ ಬಗ್ಗೆ ಪಾಠ ಮಾಡುವ ಸಂದರ್ಭ ವಿಚಾರ ಬೆಳಕಿಗೆ ಬಂದಿದೆ. ಗರ್ಭಿಣಿಯಾದರೆ ಮುಟ್ಟಾಗುವುದಿಲ್ಲ ಎಂದು ಹೇಳಿದು ಪಾಠದ ಮಧ್ಯೆ ಶಿಕ್ಷಕರು ಹೇಳಿದ್ದಾರೆ. ಆಗ ಸಂತ್ರಸ್ತೆಯ ಪಕ್ಕದಲ್ಲಿ ಕುಳಿತಿದ್ದ ಬಾಲಕಿ ತನ್ನ ಸ್ನೇಹಿತೆ ಮುಟ್ಟಾಗಿಲ್ಲ ಎಂದು ಹೇಳಿದ್ದಾಳೆ. ತಕ್ಷಣ ಈ ವಿಚಾರವನ್ನು ಶಿಕ್ಷಕರು ಮುಖ್ಯೋಪಧ್ಯಾಯರಿಗೆ ತಿಳಿಸಿದ್ದಾರೆ.
ಬಳಿಕ ಅವರು ಮಕ್ಕಳ ಸಹಾಯವಾಣಿಗೆ ವಿಚಾರವನ್ನು ತಿಳಿಸಿದ್ದಾರೆ. ಸಹಾಯವಾಣಿ ಸಿಬ್ಬಂದಿ ಶಾಲೆಗೆ ಆಗಮಿಸಿ ಸಂತ್ರಸ್ತೆಯನ್ನು ಕೌನ್ಸೆಲಿಂಗ್ ನಡೆಸಿದ್ದಾರೆ. ಆಗ ಆಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆ ಬಳಿಕ ಕಲಮಸ್ಸೆರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬಾಲಕಿಯನ್ನು ತಪಾಸಣೆ ಮಾಡಲಾಗಿದೆ. ಬಾಲಕಿ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದು, ಈ ಕೃತ್ಯದಲ್ಲಿ ಬೇರೆಯವರೂ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.