
ಎನ್ಆರ್ ಐ ಜೊತೆಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತೇ?
Sunday, February 27, 2022
ಇಡುಕ್ಕಿ: ಅನಿವಾಸಿ ಭಾರತೀಯನೊಂದಿಗೆ ಅಕ್ರಮ ಸಂಬಂಧ ಮುಂದುವರಿಸಲು ತೊಡಕಾಗಿದ್ದ ಪತಿಯನ್ನೇ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ್ದ ಪಂಚಾಯತ್ ಸದಸ್ಯೆ ಹಾಗೂ ಆಕೆಯ ಪ್ರಿಯಕರ ಸಿಕ್ಕಿಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.
ಸ್ಥಳೀಯ ಸಂಸ್ಥೆಯ ಸದಸ್ಯೆ ಸೌಮ್ಯಾ ಅಬ್ರಾಹಂ(34) ಹಾಗೂ ಆಕೆಯ ಪ್ರಿಯಕರ 5ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ ಸುನಿಲ್ ಬೈಕ್ನಲ್ಲಿ ಫೆ.22ರಂದು ಇರಿಸಿದ್ದರು. ಈ ಬಗ್ಗೆ ಬಂದ ಮಾಹಿತಿಯ ಮೇರೆಗೆ ಸುನೀಲ್ ಬೈಕ್ ಅನ್ನು ಜಪ್ತಿ ಮಾಡಿದ ಪೊಲೀಸರು ಅದರಲ್ಲಿದ್ದ ಎಂಡಿಎಂಎ ಮಾದಕ ದ್ರವ್ಯವನ್ನು ವಶಕ್ಕೆ ಪಡೆದುಕೊಂಡಿದ್ದರು.
ತನ್ನ ಬೈಕ್ನಲ್ಲಿ ಮಾದಕದ್ರವ್ಯವಿದ್ದಿರುದು ಕಂಡು ಸ್ವತಃ ಸುನೀಲ್ ಗೆ ಶಾಕ್ ಆಗಿತ್ತು. ಬಳಿಕ ತನಗೇನು ಗೊತ್ತಿಲ್ಲ. ನನ್ನದೇನು ತಪ್ಪಿಲ್ಲವೆಂದು ಸುನಿಲ್ ಹೇಳಿಕೊಂಡಿದ್ದರು. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಾಗ ಪ್ರಕರಣದ ಅಸಲಿಯತ್ತು ಬಯಲಾಗಿದೆ.
ಸುನಿಲ್ ಬೈಕ್ನಲ್ಲಿ ಯಾರೋ ಡ್ರಗ್ಸ್ ಇಟ್ಟಿರುವ ವಿಚಾರ ತಿಳಿದ ಪೊಲೀಸ್ ಮಾಹಿತಿದಾರರು ಅದನ್ನು ತನಿಖಾಧಿಕಾರಿಗಳಿಗೆ ತಿಳಿಸುತ್ತಾರೆ. ನಂತರ ಫೋನ್ ಸಂಭಾಷಣೆಯ ಆಧಾರದಲ್ಲಿ ಡ್ರಗ್ಸ್ ಇಟ್ಟ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ಅಲ್ಲದೆ ಎನ್ಆರ್ಐ ವಿನೋದ್ ರಾಜೇಂದ್ರನ್(43) ಹಾಗೂ ಡ್ರಗ್ಸ್ ಇಟ್ಟಿರುವ ವ್ಯಕ್ತಿ ನಿರಂತರ ಸಂಪರ್ಕದಲ್ಲಿರುವುದು ತಿಳಿಯುತ್ತದೆ.
ಎನ್ಆರ್ಐ ಸಂಪರ್ಕದಲ್ಲಿದ್ದುದು ಸುನಿಲ್ ಪತ್ನಿ ಸೌಮ್ಯಾ ಎಂಬುದು ಆ ಬಳಿಕ ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಇಬ್ಬರ ನಡುವೆ ಅಕ್ರಮ ಸಂಬಂಧ ಇದ್ದಿದ್ದು ತಿಳಿದು ಬರುತ್ತದೆ. ಈ ಕೃತ್ಯ ಎಸಗಲು ನೆರವು ನೀಡಿದ್ದಾಗಿ ಸೌಮ್ಯಾ ತಪ್ಪೊಪ್ಪಿಕೊಂಡಿದ್ದಾಳೆ. ಎಂಡಿಎಂಎ ಸರಬರಾಜು ಮಾಡಿದ ವ್ಯಕ್ತಿಯು ಸೇರಿದಂತೆ ಕೃತ್ಯ ಎಸಗಿದ ಎಲ್ಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.