
ಮಂಗಳೂರು: ಬೇರೆ ಯಾರದೋ ಫ್ಲ್ಯಾಟ್ ಅನ್ನು ಲೀಸ್ ಗೆ ನೀಡಿ ವಂಚನೆ; ಆರೋಪಿಗಳಿಬ್ಬರು ಅರೆಸ್ಟ್
Thursday, February 3, 2022
ಮಂಗಳೂರು: ಬೇರೆ ಯಾರದೋ ಪ್ಲ್ಯಾಟ್ ಅನ್ನು ಮಹಿಳೆಯೋರ್ವರಿಗೆ ಲೀಸ್ ಗೆ ನೀಡಿ ವಂಚನೆಗೈದಿರುವ ಇಬ್ಬರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಅಲಿಯಾಸ್ ದೀಪಕ್ ಸಾವಿಯೊ ಅಂದ್ರಾದೆ(31) ಹಾಗೂ ಇಮ್ತಿಯಾಝ್ (43) ಬಂಧಿತ ಆರೋಪಿಗಳು. ಬೆಳ್ತಂಗಡಿ ಮೂಲದ ನಗರದ ಖಾಸಗಿ ಮೆಡಿಕಲ್ ಒಂದರಲ್ಲಿ ಉದ್ಯೋಗಿಯಾಗಿರುವ ಪ್ರಿಯಾ ಕೆ.ಆರ್. ವಂಚನೆಗೊಳಗಾದವರು.
ಆರೋಪಿಗಳು ಮಹಮ್ಮದ್ ಅಶ್ರಫ್ ಎಂಬವರ ಫ್ಲ್ಯಾಟ್ ಅನ್ನು ತಮ್ಮದೆಂದು ನಂಬಿಸಿ ಪ್ರಿಯಾ ಅವರಿಗೆ 2 ವರ್ಷಗಳ ಅವಧಿಗೆ ಲೀಸ್ ಗೆ ನೀಡಿ ಅಗ್ರಿಮೆಂಟ್ ಮಾಡಿಸಿದ್ದರು. 2020ರ ಜೂನ್ ನಲ್ಲಿ ಕೆ.ಎಸ್.ರಾವ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್ ನಲ್ಲಿರುವ ಫ್ಲ್ಯಾಟ್ ಅನ್ನು ಲೀಸ್ ಗೆ ಕೊಡಿಸಿದ್ದರು. ಆರೋಪಿಗಳು 2 ವರ್ಷಗಳ ಅವಧಿಗೆ 5ಲಕ್ಷ ರೂ. ನಿಗದಿ ಪಡಿಸಿ ಬ್ರಿಜೇಶ್ ಎಂಬಾತನನ್ನು ಮನೆ ಮಾಲಕ ಮಹಮ್ಮದ್ ಅಶ್ರಫ್ ಎಂದು ನಂಬಿಸಿ ಅಗ್ರಿಮೆಂಟ್ ಗೆ ಸಹಿ ಹಾಕಿಸಿದ್ದರು.
ಆ ಬಳಿಕ ಪ್ರಿಯಾ ಕೆ.ಆರ್., ಆ ಫ್ಲ್ಯಾಟ್ ನಲ್ಲಿ ವಾಸಿಸಲು ತೊಡಗಿತ್ತಿದ್ದರು. ಇದೀಗ ಮನೆಯ ನಿಜವಾದ ಮಾಲಕ ಮಹಮ್ಮದ್ ಅಶ್ರಫ್ ಬಂದಾಗಲೇ ಆಕೆಗೆ ತಾವು ವಂಚನೆಗೊಳಗಾಗಿದ್ದು ತಿಳಿದು ಬಂದಿದೆ. ತಕ್ಷಣ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಿಂದ ಆರೋಪಿಗಳಿಂದ ಇದೇ ರೀತಿ ವಂಚನೆಗೈದ ಮೂರು ಪ್ರಕರಣಗಳು ಬಯಲಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.