ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ಪ್ರಕರಣ: ಮೂವರು ಗಿರಾಕಿಗಳು ಸೇರಿದಂತೆ ಏಳು ಮಂದಿ ಅರೆಸ್ಟ್
Wednesday, February 9, 2022
ಮಂಗಳೂರು: ನಗರದೊಳಗಡೆ ಅಪಾರ್ಟ್‌ಮೆಂಟ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಬಳಸಿಕೊಂಡು ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯೊಂದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಸಿಸಿಬಿ ಪೊಲೀಸರು ಮತ್ತೆ ಮೂವರು ಗ್ರಾಹಕರು ಸೇರಿದಂತೆ ನಾಲ್ಕು ಮಂದಿ ಪಿಂಪ್‌ಗಳನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೇರಿದೆ.
ಸಂದೀಪ್, ಸಿಪ್ರಿಯಾನ್ ಅಂಡ್ರಾದೆ, ರಹಮತ್, ಸನಾ, ಉಮ್ಮರ್ ಕುಂಞಿ, ಮೊಹಮ್ಮದ್ ಹನೀಫ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇಲ್ಲಿ ಆರೋಪಿಗಳು ಕಾಲೇಜು ವಿದ್ಯಾರ್ಥಿನಿಯರು ಹಾಗೂ ಯುವತಿಯರನ್ನೇ ಟಾರ್ಗೆಟ್ ಮಾಡಿ ದಂಧೆಗೆ ಬಳಸುತ್ತಿದ್ದರು. ಮೊದಲು ಆಮಿಷವೊಡ್ಡಿ ಸಂತ್ರಸ್ತೆಯರ ಪರಿಸ್ಥಿತಿಯನ್ನೇ ದುರ್ಬಳಕೆ ಮಾಡಿ ಆರೋಪಿಗಳು ತಮ್ಮ ಜಾಲಕ್ಕೆ ಸಿಲುಕಿಸುತ್ತಿದ್ದರು. ಈ ಹೈಟೆಕ್ ವೇಶ್ಯವಾಟಿಕೆ ದಂಧೆಯಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ನಾಲ್ವರು ಸಂತ್ರಸ್ತೆಯರನ್ನು ರಕ್ಷಿಸಲಾಗಿತ್ತು. ಇದೀಗ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು ಮೂವರು ಗ್ರಾಹಕರು ಮೂವರು ಪಿಂಪ್‌ಗಳು ಸೇರಿದಂತೆ ಮತ್ತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ರಕ್ಷಣೆಗೊಳಪಟ್ಟ ಸಂತ್ರಸ್ತೆಯರಲ್ಲಿ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಾಗಿದ್ದರು. ಅವರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನೀಡಿರುವ ಹೇಳಿಕೆಯ ಆಧಾರದಲ್ಲಿ ಇದೀಗ ಮತ್ತೆ ಆರು ಮಂದಿಯನ್ನು ಬಂಧಿಸಲಾಗಿದೆ. ಈ ವಿದ್ಯಾರ್ಥಿನಿಯನ್ನು ಕಳೆದ 2-3 ತಿಂಗಳುಗಳಿಂದ ವೇಶ್ಯಾವಾಟಿಕೆ ದಂಧೆಗೆ ಆರೋಪಿಗಳು ಬಳಸಿಕೊಂಡಿದ್ದರು. ಈಕೆಗೆ ಆರು ಬಾರಿ ಬೇರೆ ಬೇರೆ ವ್ಯಕ್ತಿಗಳಿಂದ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಪ್ಲ್ಯಾಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗುತ್ತಿದ್ದ ವೇಶ್ಯವಾಟಿಕೆಯ ಚಲನವಲನದ ದೃಶ್ಯಾವಳಿಗಳನ್ನು ಇರಿಸಿಕೊಂಡು ಪಿಂಪ್‌ಗಳು ಬೆದರಿಕೆಯೊಡ್ಡಿ ಕೃತ್ಯದಲ್ಲಿ ಮತ್ತೆ ಮತ್ತೆ ಭಾಗಿಯಾಗುವಂತೆ ಸಂತ್ರಸ್ತೆಯರಿಗೆ ಒತ್ತಡ ಹೇರುತ್ತಿದ್ದರು.
ಇದೊಂದು ವ್ಯವಸ್ಥಿತ ಜಾಲವಾಗಿದ್ದು ಕೂಲಂಕುಷ ತನಿಖೆಯನ್ನು ನಡೆಸಲು ಮಂಗಳೂರು ಪೊಲೀಸ್ ಕಮಿಷನರ್ ಪ್ರಕರಣವನ್ನು ಡಿಸಿಪಿ ನೇತೃತ್ವದಲ್ಲಿ ಸಿಸಿಬಿ ಪೊಲೀಸರಿಗೆ ವಹಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಪ್ರತ್ಯೇಕ ನಾಲ್ಕು ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಇನ್ನು ಮೂರು ಮಂದಿ ಭಾಗಿಯಾಗಿದ್ದು ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಈ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸಮಗ್ರ ತನಿಖೆ ನಡೆದು ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಪೊಲೀಸರು ಬಂಧಿಸಬೇಕಾಗಿದೆ.