
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದು ಹೋದ ವಜ್ರದ ಬಳೆ ಮರಳಿ ನೀಡಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Thursday, February 3, 2022
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದು ಹೋಗಿದ್ದ ವಜ್ರದ ಬಳೆಯನ್ನು ವಾರಿಸುದಾರೆ ಮಹಿಳೆಗೆ ಹಿಂದಿರುಗಿಸಿ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಾಮಾಣಿಕತೆ ಮೆರೆದ ಘಟನೆಯೊಂದು ನಡೆದಿದೆ.
ಮಂಗಳೂರು ವಿಮಾನ ನಿಲ್ದಾಣದ ಟ್ರಾಲಿ ರಿಟ್ರೀವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ವಜ್ರದ ಬಳೆ ವಾಪಾಸ್ ಮಾಡಿದವರು. ಬೆಂಗಳೂರಿನಿಂದ ಬಂದಿದ್ದ ಸಂಬಂಧಿಯನ್ನು ಕರೆದೊಯ್ಯಲು ಬಂದಿದ್ದ ಮಹಿಳೆಯೋರ್ವರು ಬಳೆಯನ್ನು ಕಳೆದುಕೊಂಡಿದ್ದರು. ವಿಮಾನ ನಿಲ್ದಾಣದಿಂದ ತೆರಳಿದ ಬಳಿಕ ಮಹಿಳೆಗೆ ಬಳೆ ಕಳೆದುಕೊಂಡಿರುವುದು ಗಮನಕ್ಕೆ ಬಂದಿದೆ.
ತಕ್ಷಣ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಗೆ ಮಾಹಿತಿ ನೀಡಿ ಬಳೆ ಪತ್ತೆಹಚ್ಚುವಂತೆ ಕೋರಿದ್ದರು. ಅಷ್ಟರಲ್ಲಾಗಲೇ ಟ್ರಾಲಿ ರಿಟ್ರಿವರ್ ಸಿಬ್ಬಂದಿ ಅಶ್ರಫ್ ಮೊಯ್ದೀನ್ ಅವರಿಗೆ ಬಳೆಯು ಟರ್ಮಿನಲ್ ಮಹಡಿಯ ನಿರ್ಗಮನ ಸ್ಥಳದಲ್ಲಿ ದೊರಕಿತ್ತು. ಅವರು ಅದನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂರಿಸಿದ್ದರು.
ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಈ ಬಗ್ಗೆ ಭದ್ರತಾ ತಂಡಕ್ಕೆ ಮಾಹಿತಿ ನೀಡುತ್ತಿದ್ದಂತೆ, ಬಳೆ ದೊರಕಿದ್ದು ಖಚಿತವಾಗಿದೆ. ಬಳೆ ಆಕೆಯದ್ದೇ ಎಂದು ಖಚಿತಗೊಂಡ ಬಳಿಕ ಮಹಿಳೆಗೆ ಬಳೆ ಹಸ್ತಾಂತರ ಮಾಡಲಾಯಿತು. ಅಶ್ರಫ್ ಅವರು ಪ್ರಯಾಣಿಕರಿಗೆ ಸೇರಿರುವ ಬೆಳೆಬಾಳುವ ವಸ್ತುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರ ಮಾಡಿರುವ ಎರಡನೇ ಉದಾಹರಣೆ ಇದಾಗಿದೆ. ಇದೀಗ ಅಶ್ರಫ್ ಮೊಯ್ದೀನ್ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.