
ತಮ್ಮ ಪೂರ್ವಿಕರ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ ಅಮಿತಾಭ್ ಬಚ್ಚನ್: ಇದಕ್ಕೆ ದೊರಕಿದ ಮೊತ್ತ ಕೇಳಿದ್ರೆ ದಂಗಾಗ್ತೀರಾ
Friday, February 4, 2022
ಮುಂಬೈ: ಬಿಗ್ ಬಿ ಅಮಿತಾಭ್ ಬಚ್ಚನ್ ಭಾರತೀಯ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಓರ್ವರು. ಇವರು ಭಾರೀ ಪ್ರಮಾಣದ ಆಸ್ತಿಯನ್ನು ಹೊಂದಿದ್ದಾರೆ. ಮುಂಬೈಯೊಂದರಲ್ಲೇ 6 ಐಷಾರಾಮಿ ಬಂಗ್ಲೆಯನ್ನು ಹೊಂದಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿ ಐದು ಐಷಾರಾಮಿ ಬಂಗಲೆಗಳಿದ್ದರೂ ಅಮಿತಾಬ್ ಬಚ್ಚನ್ ಕಳೆದ ವರ್ಷ ಅಂಧೇರಿಯಲ್ಲಿ 31 ಕೋಟಿ ರೂ. ಮೌಲ್ಯದ ಡುಪ್ಲೆಕ್ಸ್ ಮನೆಯನ್ನು ಖರೀದಿಸಿದ್ದಾರೆ.
ಅಮಿತಾಭ್ ಬಳಿ ಸಾಕಷ್ಟು ಮನೆಗಳಿದ್ದರೂ ಅವರ ಮೊದಲ ಮನೆಯೇ ಬಹಳ ವಿಶೇಷವಾದದ್ದು. ಆದರೆ, ಆ ಮನೆ ಇರೋದು ಮಾತ್ರ ಮುಂಬೈನಲ್ಲಿಲ್ಲ ಬದಲಾಗಿ ದೆಹಲಿಯಲ್ಲಿದೆ. ದಕ್ಷಿಣ ದೆಹಲಿಯಲ್ಲಿರುವ ದುಬಾರಿ ಮೌಲ್ಯದ ಬಂಗಲೆಯನ್ನು ಸೊಪಾನ್ ಎಂದು ಕರೆಯಲಾಗುತ್ತದೆ. ಈ ಸೊಪಾನ್ ಮನೆಯಲ್ಲಿ ಅಮಿತಾಭ್ ತಂದೆ ರಾಯ್ ಬಚ್ಚನ್ ಹಾಗೂ ತಾಯಿ ತೇಜಿ ಬಚ್ಚನ್ ವಾಸವಿದ್ದರು.
ಅಮಿತಾಭ್ ಬಚ್ಚನ್ ನಟನಾಗುವ ಮೊದಲು ಇದೇ ಮನೆಯಲ್ಲಿ ವಾಸವಿದ್ದರು. ಇದು ಬಚ್ಚನ್ ಕುಟುಂಬದ ಮೊದಲ ಆಸ್ತಿಯಾಗಿದೆ. ಇತ್ತೀಚೆಗಷ್ಟೇ ಅದನ್ನು ಅಮಿತಾಭ್ ಮಾರಾಟ ಮಾಡಿದ್ದಾರೆ. ಅಮಿತಾಭ್ ತಾಯಿ ತೇಜಿ ಹೆಸರಿನಲ್ಲಿದ್ದ ಈ ಸೊಪಾನ್ ಬಂಗಲೆಯನ್ನು ಬರೋಬ್ಬರಿ 23 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆಂದು ತಿಳಿದುಬಂದಿದೆ. ನಾಜೊನ್ ಗ್ರೂಪ್ ಆಫ್ ಕಂಪನಿಯ ಸಿಇಒ ಅವನಿ ಬೇಡರ್ ಎಂಬುವರಿಗೆ ಅಮಿತಾಭ್ ಈ ಮನೆಯನ್ನು ಮಾರಾಟ ಮಾಡಿದ್ದಾರೆಂದು ತಿಳಿದುಬಂದಿದೆ. ಅವನಿ ಬೇಡರ್ ಹಾಗೂ ಅಮಿತಾಭ್ ಸುಮಾರು 35 ವರ್ಷಗಳಿಂದ ಪರಿಚಿತರೆಂದು ತಿಳಿದುಬಂದಿದೆ.
ಸದ್ಯ ಬಂಗಲೆಯನ್ನು ಖರೀದಿ ಮಾಡಿರುವ ಅವನಿ ಬೇಡರ್ ಈ ಬಂಗಲೆಯನ್ನು ಕೆಡವಿ ತಮಗೆ ಬೇಕಾದಂತೆ ಮರು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹಳೆಯ ಕಾಲದ ಬಂಗಲೆಯಾಗಿರುವುದರಿಂದ ಅದನ್ನು ಆಧುನಿಕ ಶೈಲಿಗೆ ಬದಲಾಯಿಸಲು ನಿರ್ಧರಿಸಿದ್ದಾರೆ. ನಾವು ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಹಾಗೂ ಹೆಚ್ಚುವರಿ ಆಸ್ತಿಗಾಗಿ ಹುಡುಕುತ್ತಿದ್ದೆವು. ಈ ಆಫರ್ ಬಂದ ತಕ್ಷಣ ಈ ಆಸ್ತಿಯನ್ನು ಖರೀದಿಸಿದ್ದೇವೆ ಎಂದು ಅವನಿ ಹೇಳಿದರು.