
ಬೃಹತ್ ಗಾತ್ರದ ಮೀನು ಹೊಟ್ಟೆಗೆ ಇರಿದು ಮೀನುಗಾರ ಸಾವು
Friday, February 4, 2022
ವಿಶಾಖಪಟ್ಟಣ: ಬೃಹತ್ ಗಾತ್ರದ ಮೀನೊಂದು ಮೀನುಗಾರನೋರ್ವನ ಹೊಟ್ಟೆಗೆ ಇರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದೆ.
ಮೀನುಗಾರ ಎನ್. ಜೋಗಣ್ಣ ಮೃತಪಟ್ಟ ದುರ್ದೈವಿ.
ಮೀನುಗಾರ ಜೋಗಣ್ಣ ಮುತ್ಯಾಲಮ್ಮ ಪಾಲೆಂ ಕರಾವಳಿಯ ಆಳ ಸಮುದ್ರದಲ್ಲಿ ಮೀನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಅವರು ಹಾಕಿರುವ ಬಲೆಗೆ 70 ಕೆ.ಜಿ ತೂಕದ ಕೊಮ್ಮು ಕೋಣಂ(ಬ್ಲ್ಯಾಕ್ ಮರ್ಲಿನ್) ಮೀನು ಸಿಲುಕಿಕೊಂಡಿದೆ. ಈ ಬೃಹತ್ ಗಾತ್ರದ ಮೀನನ್ನು ದೋಣಿಗೆ ಎಳೆದು ಹಾಕಲು ಸಾಧ್ಯವಾಗದೆ ಜೋಗಣ್ಣ ಉಳಿದ ಮೀನುಗಳನ್ನು ದೋಣಿಗೆ ಸಾಗಿಸಲು ಯತ್ನಿಸಿದ್ದಾರೆ. ಈ ವೇಳೆ ಚೂಪಾದ ಕೊಕ್ಕೆಯುಳ್ಳ ಈ ಕೊಮ್ಮಕೋಣಂ ಮೀನು ಜೋಗಣ್ಣನ ಹೊಟ್ಟೆಗೆ ಇರಿದಿದೆ. ಮೀನು ಚುಚ್ಚಿರುವ ರಭಸಕ್ಕೆ ಜೋಗಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತಕ್ಷಣ ಉಳಿದ ಮೀನುಗಾರರು ಅವರ ಮೃತದೇಹವನ್ನು ದಡಕ್ಕೆ ತಂದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.