
ವರದಿ ವಾಚನ ಮಾಡುತ್ತಿದ್ದಾಗಲೇ ಎಚ್ಚೆತ್ತ ಶಿಶು: ಮೂರು ತಿಂಗಳ ಮಗುವನ್ನು ಎತ್ತಿಕೊಂಡೇ ವಾರ್ತೆ ಓದಿದ ವಾಚಕಿ
Sunday, February 13, 2022
ನ್ಯೂಯಾರ್ಕ್: ಪ್ರಪಂಚದ ಯಾವ ಮೂಲೆಯೇ ಇರಲಿ ಉದ್ಯೋಗಸ್ಥ ಮಹಿಳೆಯರ ಪಾಡು ಅಂತೂ ಹೇಳತೀರದು. ಅದರಲ್ಲಿಯೂ ಪ್ರಸವದ ಬಳಿಕ ವರ್ಷ ತುಂಬದ ಶಿಶುವನ್ನು ಮನೆಯಲ್ಲಿ ಬಿಟ್ಟು ಬರುವ ಮಹಿಳೆಯರ ಸಂಕಟವೋ ಅದು ದೇವರಿಗೆ ಪ್ರೀತಿ. ಹಲವಾರು ಮಂದಿ ಅವಕಾಶವಿರುವೆಡೆಗಳಲ್ಲಿ ತಾವು ಕೆಲಸ ಮಾಡುವಲ್ಲಿಗೆ ಮಗುವನ್ನು ಕರೆದುಕೊಂಡು ಹೋಗುತ್ತಾರೆ.
ಇದೀಗ ಅಂಥಹದ್ದೇ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ ವಾರ್ತಾ ವಾಚಕಿಯೊಬ್ಬಳು ತನ್ನ ಮೂರು ತಿಂಗಳ ಶಿಶುವನ್ನು ಕರೆದುಕೊಂಡು ಬಂದು ಸುದ್ದಿ ಓದುತ್ತಿದ್ದಳು. ಆಗ ನಡೆದಿರುವ ಘಟನೆಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ. ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ವೆಸ್ಟ್ ಅಲಿಸ್ ನಿವಾಸಿ ವಾರ್ತಾ ವಾಚಕಿ ರೆಬೆಕಾ ಶೂಲ್ಡ್ ತಮ್ಮ ಮೂರು ತಿಂಗಳ ಶಿಶುವಿನ ಕಾರಣದಿಂದ ಸುದ್ದಿಯಾಗಿದ್ದಾರೆ. “ಸಿಬಿಎಸ್ 58 ನ್ಯೂಸ್’ ಚಾನಲ್ನಲ್ಲಿ ಉದ್ಯೋಗಿಯಾಗಿರುವ ರೆಬೆಕಾ, ಹವಾಮಾನ ವರದಿಗಳನ್ನು ವಾಚನ ಮಾಡುತ್ತಾರೆ.
ಗರ್ಭಿಣಿಯಾಗಿದ್ದ ಸಂದರ್ಭ ಕೊರೊನಾ ಇದ್ದ ಕಾರಣ ಮನೆಯಿಂದಲೇ ಅವರು ಕೆಲಸ ಮಾಡುತ್ತಿದ್ದರು. ಬಾಣಂತನ ಮುಗಿಸಿ ರಜೆ ಮುಗಿಸಿಕೊಂಡು ಇತ್ತೀಚೆಗಷ್ಟೇ ಕಚೇರಿಗೆ ಬರತೊಡಗಿದ್ದಾರೆ. ಮಗುವಿಗೆ ಇನ್ನೂ ಮೂರು ತಿಂಗಳಾಗಿದ್ದು, ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮಗುವನ್ನು ಕರೆದುಕೊಂಡೇ ಕಚೇರಿಗೆ ಬರುತ್ತಿದ್ದರು. .
ಆದರೆ ಮೊನ್ನೆ, ಮಗುವನ್ನು ಮಲಗಿಸಿ ಹವಾಮಾನ ವರದಿ ಓದುತ್ತಿದ್ದರು. ಆದರೆ ಏಕಾಏಕಿ ಮಗು ಎದ್ದುಬಿಟ್ಟಿದೆ. ಏನು ಮಾಡುವುದೆಂದು ತೋಚದೆ ಅವರು ಅದನ್ನು ಎತ್ತಿಕೊಂಡೇ ಕ್ಯಾಮರಾ ಮುಂದೆ ಬಂದಿದ್ದಾರೆ. ಅಚ್ಚರಿಗೊಂಡ ಸುದ್ದಿ ಸಂಪಾದಕರು ಲೈವ್‌ನಲ್ಲಿ ಮಗು ಅತ್ತುಬಿಟ್ಟರೆ ಮಾನ ಹೋಗುತ್ತದೆ ಎಂದು ಸಂದೇಹ ಪಟ್ಟಿದ್ದಾರೆ.
ಆದರೆ ರೆಬೆಕಾ ಮಾತ್ರ ತಮ್ಮ ಮಗಳ ಮೇಲೆ ವಿಶ್ವಾಸ ಹೊಂದಿದ್ದರು. ಆಕೆ ಒಳ್ಳೆಯ ನಿದ್ದೆ ಮಾಡಿ ಎದ್ದಿದ್ದಾಳೆ ತಂಟೆ ಮಾಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಆಕೆ ಮಗಳನ್ನು ಎತ್ತುಕೊಂಡೇ ಹವಾಮಾನ ವರದಿಯನ್ನು ಪ್ರಸ್ತುತ ಪಡಿಸಿಯೇಬಿಟ್ಟಿದ್ದಾರೆ. ಮಗು ಸುಮ್ಮನೇ ಕುಳಿತಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಶಿಶುವನ್ನು ಕಾಳಜಿ ಮಾಡಿರುವ ತಾಯಿ ಹಾಗೂ ಶಿಶುವಿನೊಂದಿಗೆ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿರುವ ಮಾಧ್ಯಮ ಸಂಸ್ಥೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.