ಪೊಲೀಸರು ಬಾಡಿವೋರ್ನ್ ಕ್ಯಾಮರಾ ಧರಿಸಲು ಸೂಚನೆ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ
Monday, February 7, 2022
ಬೆಂಗಳೂರು: ಕರ್ತವ್ಯ ನಿರ್ವಹಿಸುವ ವೇಳೆ ಪೊಲೀಸರು ಬಾಡಿವೋರ್ನ್ ಕ್ಯಾಮೆರಾ ಧರಿಸುವಂತೆ ಸೂಚನೆ ನೀಡಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯವಾದಿ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿತ್ತು. ಸರಕಾರಿ ಪರ ವಕೀಲರು ವಾದಿಸಿ, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಾಗಿ 2,680 ಬಾಡಿವೋರ್ನ್ ಕ್ಯಾಮೆರಾ ಖರೀದಿಸಲಾಗುತ್ತದೆ. ಈವರೆಗೆ 1,097 ಬಾಡಿವೋರ್ನ್ ಕ್ಯಾಮೆರಾ ಖರೀದಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು, ಖರೀದಿಸಿರುವ ಬಾಡಿವೋರ್ನ್ ಕ್ಯಾಮೆರಾಗಳನ್ನು ಬಳಸಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತ್ತು.
ಬೆಂಗಳೂರು ನಗರ ಪೊಲೀಸರಿಗಾಗಿ ಖರೀದಿಸಿರುವ ಬಾಡಿ ವೋರ್ನ್ ಕ್ಯಾಮೆರಾಗಳನ್ನು ಬಳಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು. ಪೊಲೀಸರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಾಡಿವೋರ್ನ್ ಕ್ಯಾಮೆರಾ ಖರೀದಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲೆ ಗೀತಾ ಮಿಶ್ರಾ ಅವರು ಪಿಐಎಲ್‌ನಲ್ಲಿ ನ್ಯಾಯಾಲಯವನ್ನು ಕೋರಿದ್ದರು.