ಆರತಕ್ಷತೆ ನಡೆಯುತ್ತಿದ್ದಾಗಲೇ ಕುಸಿದು ಬಿದ್ದು ವಧು ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು
Saturday, February 12, 2022
ಶ್ರೀನಿವಾಸಪುರ: ಮದುವೆ ಆರತಕ್ಷತೆ ನಡೆಯುತ್ತಿದ್ದಾಗಲೇ ವಧುವೋರ್ವಳು ದಿಢೀರ್ ಕುಸಿದು ಬಿದ್ದು, ಮೆದುಳು ನಿಷ್ಕ್ರಿಯಗೊಂಡ ಘಟನೆ ಶ್ರೀನಿವಾಸಪುರದಲ್ಲಿ ನಡೆದಿದೆ. ಈ ಸಂದರ್ಭದಲ್ಲೂ ಆಕೆಯ ಪೋಷಕರು ಅಂಗಾಂಗ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇನ್ನೇನು ವೈವಾಹಿಕ ಜೀವನಕ್ಕೆ ಕಾಲಿರಿಸಿ ಸುಖ ಸಂಸಾರ ನಡೆಸಬೇಕಿದ್ದ ಚೈತ್ರಾ(26) ಇಹಲೋಕ ತ್ಯಜಿಸಿದ್ದಾರೆ. ದುಃಖದ ನಡುವೆಯೂ ಆಕೆಯ ಪೋಷಕರು ಅಂಗಾಂಗ ದಾನ ಮಾಡಿ ಉಳಿದವರ ಬಾಳಿಗೆ ಬೆಳಕಾಗಿದ್ದಾರೆ. ಚೈತ್ರಾ ಮದುವೆ ಆರತಕ್ಷತೆ ನಡೆಯುತ್ತಿದ್ದಾಗಲೇ ವೇದಿಕೆಯ ಮೇಲೆ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಗ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಹೇಳಿದ್ದಾರೆ. ಇದರಿಂದ ಕಂಗಾಲಾದ ಪೋಷಕರು ಆಕೆಯ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಸಚಿವ ಡಾ.ಕೆ.ಸುಧಾಕರ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.