
ಹುಡುಗ ಹುಡುಗಿಗೆ 'ಐ ಲವ್ ಯೂ' ಹೇಳುವುದು ಅವಮಾನ ಮಾಡಿದಂತಲ್ಲ ಎಂದ ಕೋರ್ಟ್
Saturday, February 26, 2022
ಮುಂಬೈ: ಓರ್ವ ಯುವಕ, ಓರ್ವ ಹುಡುಗಿಗೆ ಒಂದು ಬಾರಿ “ಐ ಲವ್ ಯೂ” ಎಂದು ಹೇಳಿದಾಕ್ಷಣ ಅದು ಆಕೆಯ ನಮ್ರತೆಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದಂತಲ್ಲ. ಹೆಚ್ಚೆಂದರೆ ಅದು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಮುಂಬೈ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಪೊಕ್ಸೊ ನ್ಯಾಯಾಲಯ ಹೇಳಿದೆ.
17 ವರ್ಷದ ಬಾಲಕಿ ಬಳಿಗೆ ಹೋಗಿ ಆಕೆಗೆ ಕಣ್ಣು ಹೊಡೆದು 'ಐ ಲವ್ ಯೂ' ಎಂದಿದ್ದ 23 ವರ್ಷದ ಯುವಕನನ್ನು ಆರೋಪಮುಕ್ತ ಗೊಳಿಸಿರುವ ಪೊಕ್ಸೊ ನ್ಯಾಯಾಲಯವು, ಈ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಮೂಲಕ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವ 23 ವರ್ಷದ ಯುವಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಪೊಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ ಕಲ್ಪನಾ ಪಾಟೀಲ್ ಮಂಗಳವಾರ ವಿಚಾರಣೆ ಮಾಡಿದ್ದು, ಬುಧವಾರ ವಿವರವಾದ ಆದೇಶ ಲಭ್ಯವಾಗಿದೆ. 17 ವರ್ಷದ ಸಂತ್ರಸ್ತ ಬಾಲಕಿಯ ಕುಟುಂಬ ನೀಡಿದ ದೂರಿನ ಪ್ರಕಾರ, ಆರೋಪಿ ಯುವಕ 2016 ರಲ್ಲಿ ತಮ್ಮ ಮನೆಯ ಬಳಿ ಬಂದು ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಆತ ಬಾಲಕಿಯನ್ನು ಗುರಾಯಿಸಿದ್ದು, ಕಣ್ಣು ಹೊಡೆದಿದ್ದಾನೆ. ಅಲ್ಲಿಗೆ ಬಂದು ಎಚ್ಚರಿಸಿದ್ದ ಆಕೆಯ ತಾಯಿಗೂ ಬೆದರಿಕೆಯನ್ನು ಹಾಕಿದ್ದಾನೆ ಎನ್ನಲಾಗಿತ್ತು.
ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ದೂರು ದಾಖಲಾಗಿತ್ತು. ಆಗಿನ್ನೂ ಯುವಕ ಅಪ್ರಾಪ್ತನಾಗಿದ್ದ ಕಾರಣ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಅಡಿ ಆತನನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯು ಸುದೀರ್ಘ ಕಾಲದವರೆಗೆ ನಡೆದು ಇದೀಗ ಆದೇಶ ಹೊರಬಿದ್ದಿದೆ. ಆರೋಪಿಯು ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಸಂತ್ರಸ್ತೆಯ ಮೇಲೆ ಕೃತ್ಯ ಎಸಗಿದ್ದಾನೆ, ಸಂತ್ರಸ್ತೆ, ಆಕೆಯ ತಾಯಿಗೆ ಯಾವುದೇ ರೀತಿಯ ಬೆದರಿಕೆಯನ್ನು ನೀಡಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್ ದಾಖಲಿಸಿಲ್ಲ.
'ಐ ಲವ್ ಯೂ' ಎಂದು ಹೇಳುವುದು ಸಂತ್ರಸ್ತೆಯ ಮೇಲೆ ಆರೋಪಿಯ ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಸಂತ್ರಸ್ತೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗದು ಎಂದು ನ್ಯಾಯಾಧೀಶೆ ಕಲ್ಪನಾ ಪಾಟೀಲ್ ಹೇಳಿದ್ದಾರೆ.