
ಮಂಗಳೂರು: ಕ್ರಿಕೆಟ್ ಕಾಮೆಂಟರಿ ಮಾಡಲು ಹೋಗಿ ನಾಪತ್ತೆಯಾದ ಬಾಲಕ ಪತ್ತೆಯಾಗಿದ್ದು ಮೃತದೇಹವಾಗಿ!
Tuesday, March 1, 2022
ಮಂಗಳೂರು: ಕ್ರಿಕೆಟ್ ಕಾಮೆಂಟರಿ ಹೇಳಲು ತೆರಳಿದ್ದ ಬಾಲಕನೋರ್ವನು ಏಕಾಏಕಿ ನಾಪತ್ತೆಯಾಗಿ, ಮರುದಿನ ಸಂಜೆ ವೇಳೆಗೆ ಮೃತದೇಹವಾಗಿ ಪತ್ತೆಯಾದ ಘಟನೆ ನಗರದ ಹೊಯಿಗೆಬಜಾರ್ ಬಳಿಯ ನೇತ್ರಾವತಿ ನದಿ ತೀರದಲ್ಲಿ ನಡೆದಿದೆ.
ನಗರದ ಮಹಾಕಾಳಿಪಡ್ಪು ನಿವಾಸಿ ಚೆನ್ನಪ್ಪ ಹಾಗೂ ಆಶಾ ದಂಪತಿಯ ಎಂಬವರ ಪುತ್ರ ದೃಶ್ಯಂತ್(16) ಮೃತಪಟ್ಟ ಬಾಲಕ.
ದೃಶ್ಯಂತ್ ರವಿವಾರ ಕ್ರಿಕೆಟ್ ಕಾಮೆಂಟರಿ ಮಾಡಲೆಂದು ತೆರಳಿದ್ದನು. ಆದರೆ ರಾತ್ರಿಯಾದರೂ ಮರಳಿ ಮನೆಗೆ ಬಾರದಿರುವುದರಿಂದ ಕಳವಳಗೊಂಡ ಹೆತ್ತವರು ಆತನ ಗೆಳೆಯರಲ್ಲಿ ವಿಚಾರಣೆ ಮಾಡಿದ್ದಾರೆ. ಆದರೆ ಅವರು ತಮಗೇನು ತಿಳಿದಿಲ್ಲ ಎಂದಿದ್ದಾರೆ.
ಆದ್ದರಿಂದ ರಾತ್ರಿ ವೇಳೆಯೇ ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಈ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಸಂಜೆ ವೇಳೆಗೆ ದೃಶ್ಯಂತ್ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಪ್ಯಾಂಟ್-ಅಂಗಿ ಧರಿಸಿದ್ದ ಬಾಲಕನು ಬರೀ ಚಡ್ಡಿಯಲ್ಲಿ ಮೃತದೇಹವಾಗಿ ಪತ್ತೆಯಾಹಿದ್ದಾನೆ. ಆತ ನದಿಗೆ ಈಜಲು ಹೋಗಿದ್ದಾನೆಯೇ ಅಥವಾ ಮತ್ತೇನಾದರೂ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆಯೇ ಎಂಬ ಅನುಮಾನದಿಂದ ಪೊಲೀಸರು ಪಾಂಡೇಶ್ವರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದಾರೆ.