ಮಂಗಳೂರು: ಕಳವು ಆರೋಪಿ ಪೊಲೀಸ್ ಕಸ್ಟಡಿಯಲ್ಲಿಯೇ ಮೃತ್ಯು
Friday, February 18, 2022
ಮಂಗಳೂರು: ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬನು ಪೊಲೀಸ್ ಕಸ್ಟಡಿಯಲ್ಲಿಯೇ ಮೃತಪಟ್ಟ ಘಟನೆಯೊಂದು ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ನಗರದ ಉರ್ವ ನಿವಾಸಿ ರಾಜೇಶ್ (30) ಮೃತಪಟ್ಟ ಆರೋಪಿ.
ಇಂದು ಬೆಳಗ್ಗೆ ನಗರದ ಜ್ಯೋತಿ ಸರ್ಕಲ್ ಬಳಿಯಲ್ಲಿ ಆರೋಪಿಗಳಿಬ್ಬರು ಸ್ಮಾರ್ಟ್ ಸಿಟಿ ಕಾಮಗಾರಿಯ ಕಬ್ಬಿಣದ ಸರಳುಗಳನ್ನು ಕದ್ದು ಒಯ್ಯುತ್ತಿದ್ದರು. ಆಗ ಅಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನಗರದ ಬಂದರು ಪೊಲೀಸ್ ಠಾಣೆಯಲ್ಲಿ ತಂದು ಕೂರಿಸಿದ್ದಾರೆ. ಆದರೆ ಸಂಜೆ ವೇಳೆಗೆ ರಾಜೇಶ್ ಎಂಬ ಆರೋಪಿಗೆ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಪೊಲೀಸರು ಆತನನ್ನು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಪಾಸಣೆ ಮಾಡಿದ ಆಸ್ಪತ್ರೆಯ ವೈದ್ಯರು ರಾಜೇಶ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆ ಬಳಿಕ ಆಸ್ಪತ್ರೆಯ ವೈದ್ಯರು ಹಾಗೂ ರಾಜೇಶ್ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬಳಿಕ ಮಾತನಾಡಿ, ಪ್ರಕರಣದ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುತ್ತದೆ. ಠಾಣೆಯಲ್ಲಿರುವ ಎಲ್ಲಾ ಸಿಸಿ ಕ್ಯಾಮರಾದಲ್ಲಿ ದಾಖಲೆಗಳು ಲಭ್ಯವಿರುತ್ತದೆ. ಸೆಲ್ ಮುಂಭಾಗದಲ್ಲೂ ಸಿಸಿ ಕ್ಯಾಮರಾಗಳಿವೆ. ಘಟನೆಯ ಬಗ್ಗೆ ಉತ್ತರ ವಿಭಾಗದ ಎ.ಸಿ.ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದೇನೆ. ಪೋಸ್ಟ್ ಮಾರ್ಟಂ ವರದಿಯನ್ನು ತಜ್ಞ ವೈದ್ಯರು ಚರ್ಚಿಸಿ ವರದಿ ನೀಡುತ್ತಾರೆ. ನಮ್ಮ ತನಿಖೆಯ ಬಳಿಕ ಸಿ.ಐ.ಡಿಯಿಂದ ಪ್ರಕರಣದ ಕುರಿತು ತನಿಖೆ ನಡೆಯುತ್ತದೆ ಎಂದು ಹೇಳಿದರು.