ಹೃದಯಾಘಾತದಿಂದ ಆರ್ಜೆ ರಚನಾ ಮೃತ್ಯು!
Tuesday, February 22, 2022
ಬೆಂಗಳೂರು: ತಮ್ಮ ಪಟಪಟನೆ ಮಾತನಾಡುವ ಧ್ವನಿಯಿಂದಲೇ, ಅಸಂಖ್ಯಾತ ಜನರ ಮನಗೆದ್ದಿದ್ದ ಆರ್ಜೆ ರಚನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
39 ವರ್ಷದ ರಚನಾ, ಹೃದಯಾಘಾತದಿಂದ ನಿಧನರಾಗಿದ್ದು ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ದುಃಖವನ್ನು ತಂದಿದೆ. ರೇಡಿಯೋ ಮಿರ್ಚಿಯಲ್ಲಿ ಆರ್ಜೆಯಾಗಿ ವೃತ್ತಿ ನಿರ್ವಹಿಸುತ್ತಿದ್ದ ರಚನಾ, ತನ್ನ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದರು.
ತಮ್ಮ ಫಟಾಫಟ್ ಮಾತಿನ ಮೂಲಕ ಜನರ ಮನಗೆದ್ದಿದ್ದ ಮುದ್ದು ಮುಖದ ರಚನಾ, 7 ವರ್ಷ ಆರ್ಜೆಯಾಗಿ ಕೆಲಸ ಮಾಡಿದ್ದರು. ರಾಜ್ಯಾದ್ಯಂತ ಮನೆಮಾತಾಗಿದ್ದ ರಚನಾ, ಬಹಳ ಸಣ್ಣ ವಯಸ್ಸಿಗೇ ಬದುಕಿನ ಪಯಣ ಮುಗಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಆರ್ ಜೆ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದ ರಚನಾ, ಇತ್ತೀಚಿಗೆ ಜೆಪಿ ನಗರದ ಅಪಾರ್ಟ್ಮೆಂಟ್ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಮಾನಸಿಕವಾಗಿ ಬಹಳ ಕುಗ್ಗಿದ್ದರು ಎನ್ನಲಾಗುತ್ತಿದೆ. ಇಂದು ಮನೆಯಲ್ಲೇ ಹೃದಯಾಘತಕ್ಕೀಡಾಗಿ ಮೃತಪಟ್ಟಿದ್ದಾರೆ.
‘ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ಆರ್ಜೆ ರಚನಾ ರಕ್ಷಿತ್ ಶೆಟ್ಟಿ ಸಹೋದರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರೇಡಿಯೋ ಸಿಟಿ, ರೇಡಿಯೋ ಮಿರ್ಚಿ ಸೇರಿದಂತೆ ಹಲವಾರು ಎಫ್ಎಂಗಳಲ್ಲಿ ಆರ್ಜೆಯಾಗಿ ರಚನಾ ಕೆಲಸ ಮಾಡಿದ್ದರು.