
ವಿಟ್ಲ: ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅವಮಾನ ಮಾಡಿದ ಪ್ರಕರಣ: ಪ್ರಮುಖ ಆರೋಪಿ ಮದುಮಗ ಅರೆಸ್ಟ್
Friday, February 4, 2022
ಮಂಗಳೂರು: ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅವಮಾನ ಪ್ರಕರಣದ ಪ್ರಮುಖ ಆರೋಪಿ ಮದುಮಗ ಉಮರುಲ್ಲಾ ಬಾಷಿತ್ ನನ್ನು ವಿಟ್ಲ ಠಾಣೆಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಕೇರಳ ಮೂಲದ ಆರೋಪಿ ಉಮರುಲ್ಲಾ ಬಾಷಿತ್ ಫೆಬ್ರವರಿ ಮೊದಲ ವಾರದಲ್ಲಿ ವಿಟ್ಲದ ಕೊಳ್ನಾಡ್ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಅದೇ ನಡುರಾತ್ರಿ ವೇಳೆ ಈತ ತನ್ನ 50 ಕ್ಕೂ ಅಧಿಕ ಸ್ನೇಹಿತರೊಂದಿಗೆ ವಧುವಿನ ಮನೆಗೆ ಸಂಪ್ರದಾಯದಂತೆ ಆಗಮಿಸಿದ್ದ. ಈ ವೇಳೆ ಸಹಚರರ ಗುಂಪು ಮದುಮಗ ಬಾಷಿತ್ ಗೆ ಕೊರಗಜ್ಜ ದೈವವನ್ನು ಹೋಲುವ ವೇಷ ಹಾಕಿ ಹಾಡು, ನೃತ್ಯದೊಂದಿಗೆ ಆಗಮಿಸಿದ್ದರು.
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಆಕ್ರೋಶ ಕಾರಣವಾಗಿತ್ತು. ಆ ಬಳಿಕ ಮದುಮಗ ಈ ವಿಚಾರದ ಬಗ್ಗೆ ವೀಡಿಯೋ ಮೂಲಕ ಕ್ಷಮೆ ಯಾಚನೆ ಮಾಡಿದ್ದ. ಹಿಂದೂ ಹಾಗೂ ಮುಸ್ಲಿಂ ಸಮುದಾಯದಲ್ಲಿಯೂ ಈ ಘಟನೆ ಬಗ್ಗೆ ಭಾರೀ ಆಕ್ರೋಶ ಕೇಳಿ ಬರುತ್ತಿದ್ದಂತೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಈತನ ಸಹಚರರಲ್ಲಿ ಇಬ್ಬರನ್ನು ಬಂಧಿಸಿದ್ದರು. ಆ ಬಳಿಕದಿಂದ ಪ್ರಮಖ ಆರೋಪಿಯಾದ ಉಮರುಲ್ಲಾ ಬಾಷಿತ್ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಸದ್ಯ ವಿಟ್ಲ ಪೊಲೀಸರು ಈತನನ್ನು ಬಂಧಿಸಿದ್ದಾರೆ.