
ಪುತ್ತೂರಿನ ಹಸ್ತಾ ಶೆಟ್ಟಿ ಎಸಿಎಫ್ ಆಗಿ ಆಯ್ಕೆ: ಮೇಸ್ತ್ರಿ ಪುತ್ರಿಯ ಸಾಧನೆ
Friday, February 25, 2022
ಕುಂದಾಪುರ: ಕುಂದಾಪುರದ ಉಪವಲಯ ಅರಣ್ಯಾಧಿಕಾರಿ ಹಸ್ತಾ ಶೆಟ್ಟಿಯವರು ಎಸಿಎಫ್ ಆಗಿ ಆಯ್ಕೆಯಾಗಿದ್ದಾರೆ. ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಇದರಲ್ಲಿ ಫಾರೆಸ್ಟ್ರಿ ವಿಭಾಗದಲ್ಲಿ ಹಸ್ತಾ ಶೆಟ್ಟಿಯವರು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
2017-18ನೇ ಸಾಲಿನ ನೇಮಕಾತಿಗಾಗಿ 2018ರ ಸೆ. 5ರಂದು ಗ್ರೂಪ್ ಎ ವೃಂದದ 24 ಎಸಿಎಫ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪುತ್ತೂರಿನ ಕುಂಬ್ರದ ಪುರಂದರ ಶೆಟ್ಟಿ ಹಾಗೂ ವಾರಿಜಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಹಸ್ತಾ ಶೆಟ್ಟಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪುತ್ತೂರಿನಲ್ಲಿ ಪಡೆದು ಪಿಯುಸಿಯನ್ನು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಪಡೆದಿದ್ದರು. ಬಳಿಕ ಮಡಿಕೇರಿಯ ಪೊನ್ನಂಪೇಟೆಯ ಕಾಲೇಜಿನಲ್ಲಿ 4 ವರ್ಷಗಳ ಫಾರೆಸ್ಟ್ರಿ ಪದವಿಯನ್ನು ಅಭ್ಯಸಿಸಿ 2019ರಲ್ಲಿ ಕುಂದಾಪುರಕ್ಕೆ ಉಪ ವಲಯ ಅರಣ್ಯಾಧಿಕಾರಿಯಾಗಿ ನೇಮಕವಾಗಿದ್ದರು.
ಕರ್ತವ್ಯದಲ್ಲಿದ್ದುಕೊಂಡೇ ಎಸಿಎಫ್ ಪರೀಕ್ಷೆಗಾಗಿ ಹೆಚ್ಚಿನ ವ್ಯಾಸಂಗ ಮಾಡಿ, ಪರೀಕ್ಷೆ ಬರೆದಿದ್ದರು. ಅವರ ತಂದೆ ಪುರಂದರ ಶೆಟ್ಟಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು ಈಗ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಎರಡು ವರ್ಷಗಳ ತರಬೇತಿಯ ಬಳಿಕ ಹಸ್ತಾ ಅವರು ಎಸಿಎಫ್ ಆಗಿ ನಿಯೋಜನೆಗೊಳ್ಳಲಿದ್ದಾರೆ.