Looti Gang in SVT Mangaluru- ವೆಂಕಟರಮಣ ದೇವಳ ಟ್ರಸ್ಟ್ ಹೆಸರಲ್ಲಿ ಬಲವಂತವಾಗಿ ಹಣ ಸಂಗ್ರಹ; ಪೊಲೀಸ್ ಆಯುಕ್ತರಿಗೆ ದೂರು
ವೆಂಕಟರಮಣ ದೇವಳ ಟ್ರಸ್ಟ್ ಹೆಸರಲ್ಲಿ ಬಲವಂತವಾಗಿ ಹಣ ಸಂಗ್ರಹ; ಪೊಲೀಸ್ ಆಯುಕ್ತರಿಗೆ ದೂರು
ಮಂಗಳೂರಿನಲ್ಲಿ ಲಕ್ಷಾಂತರ ಭಕ್ತ ಜನರು ಸೇರುವ ಕೊಡಿಯಾಲ್ ತೇರು ಮಹೋತ್ಸವದಲ್ಲಿ ಹಣ ಲೂಟಿ ಮಾಡುವ ಗ್ಯಾಂಗೊಂದು ಸದ್ದಿಲ್ಲದೆ ಕಾರ್ಯಾಚರಿಸುತ್ತಿದೆ.
ಜಾತ್ರಾ ಮಹೋತ್ಸವದ ಸಮಯದಲ್ಲಿ ವಿವಿಧ ಬಗೆಯ ಸಂತೆ ಹಾಗೂ ಅಂಗಡಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಸ್ಥಳದಲ್ಲಿ ಹಾಕಲಾಗುತ್ತದೆ.
ಕರಾವಳಿಯ ವಿವಿಧ ಪ್ರದೇಶದ ವ್ಯಾಪಾರಿಗಳು ಇಲ್ಲಿ ಬಂದು ತಮ್ಮ ತಾತ್ಕಾಲಿಕ ಅಂಗಡಿಗಳ ಮೂಲಕ ವ್ಯಾಪಾರ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಅನಾಮಧೇಯ ಲೂಟಿಕೋರ ಗ್ಯಾಂಗೊಂದು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಹೆಸರಿನಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.
ಈ ಬಗ್ಗೆ ಕೆಲ ವ್ಯಾಪಾರಿಗಳು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ವಿಚಾರಿಸಿದಾಗ ಈ ವಿಷಯ ಬಯಲಿಗೆ ಬಂದಿದೆ. ನಾವು ಯಾರ ಬಳಿಯೂ ದುಡ್ಡು ಕೇಳಲು ಯಾವ ಜನರನ್ನೂ ನೇಮಿಸಿಲ್ಲ. ಸಂತೆ ವ್ಯಾಪಾರಸ್ಥರಿಂದ ಹಣ ಪಡೆದಿಲ್ಲ ಎಂದು ಹೇಳಿದ್ದಾರೆ.
ಇದರಿಂದ ವ್ಯಾಪಾರಸ್ಥರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ನೇರವಾಗಿ ಭೇಟಿ ಮಾಡಿ ದೂರು ನೀಡಿದ್ದು, ಕಳೆದ ಹಲವು ವರ್ಷಗಳಿಂದ ಈ ಲೂಟಿಕೋರ ಗ್ಯಾಂಗ್ ವ್ಯವಸ್ಥಿತವಾಗಿ ದಂಧೆ ಮಾಡಿಕೊಂಡು ಕೋಟ್ಯಂತರ ರೂಪಾಯಿ ಸಂಗ್ರಹಿಸಿದೆ ಎನ್ನುವ ಆರೋಪ ಇದೆ.
ಆದರೆ, ಇದುವರೆಗೆ ಈ ಲೂಟಿ ಗ್ಯಾಂಗ್ ನ್ನು ಪತ್ತೆ ಹಚ್ಚುವ ಯಾ ಅದರ ವಿರುದ್ಧ ಕ್ರಮ ಕೈಗೊಳ್ಳುವ ಯಾವ ಕೆಲಸವನ್ನೂ ಪೊಲೀಸರು ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸ್ವತಃ ಮುತುವರ್ಜಿ ವಹಿಸಿ ತನಿಖೆಯನ್ನು ನಡೆಸಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಬೀದಿ ಬದಿ ವ್ಯಾಪಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.