
Mangaluru: ಉಕ್ರೇನ್ ನಲ್ಲಿ ತಾನು ಸುರಕ್ಷಿತವಾಗಿದ್ದೇನೆ ಎಂದ ಮಂಗಳೂರು ಮೂಲದ ವೈದ್ಯಕೀಯ ವಿದ್ಯಾರ್ಥಿ, ಪೋಷಕರು ನಿರಂತರ ಸಂಪರ್ಕದಲ್ಲಿ
Friday, February 25, 2022
ಮಂಗಳೂರು: ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ಅಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವೈದ್ಯಕೀಯ ಶಿಕ್ಷಣಕ್ಕೆ ಪ್ರಸಿದ್ಧವಾಗಿರುವ ಉಕ್ರೇನ್ ನಲ್ಲಿ ಭಾರತದ ಸಾಕಷ್ಟು ವೈದ್ಯಕೀಯ ಶಿಕ್ಷಣಾರ್ಥಿಗಳು ಎಂಬಿಬಿಎಸ್ ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳೂರಿನ ಕ್ಲಾಟನ್ ಹಾಗೂ ಅನೈನಾ ಅನ್ನ ಎಂಬ ವೈದ್ಯಕೀಯ ವಿದ್ಯಾರ್ಥಿಗಳೀರ್ವರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ ಮಂಗಳೂರು ಪಡೀಲು ಮೂಲದ ವೈದ್ಯಕೀಯ ವಿದ್ಯಾರ್ಥಿ ಕ್ಲಾಟನ್ ಉಕ್ರೇನ್ ನಲ್ಲಿ ಸುರಕ್ಷಿತವಾಗಿದ್ದೇನೆಂದು ಪೋಷಕರಿಗೆ ವೀಡಿಯೋ ಕಾಲ್ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೆ ತಾನಿರುವ ಉಗ್ರೇನ್ ನ ರಾಜಧಾನಿ ಕೀವ್ ನಲ್ಲಿನ ಹಾಸ್ಟೆಲ್ ನಲ್ಲಿ ಭಾರತದ 500 ಮಂದಿ ವೈದ್ಯಕೀಯ ವಿದ್ಯಾರ್ಥಿಗಳಿದ್ದು ಎಲ್ಲರೂ ಸುರಕ್ಷಿತರಾಗಿದ್ದಾರೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಯಾವುದೇ ಭೀತಿ ಇಲ್ಲದಿದ್ದರೂ, ಮಧ್ಯಾಹ್ನ ವೇಳೆ ಏರ್ಪೋಟೊಂದರಲ್ಲಿ ಆದ ಮಿಷೆಲ್ ಅಟ್ಯಾಕ್ ಬಳಿಕ ಸ್ವಲ್ಪ ಭೀತಿಯ ವಾತಾವರಣ ನಿರ್ಮಾಣವಾಗಿದೆ ಎಂದಿದ್ದಾರೆ.
ಉಕ್ರೇನ್ ನಲ್ಲಿರುವ ಭಾರತದ ರಾಯಭಾರಿ ಇಲಾಖೆ ನಮ್ಮನ್ನು ಸಂಪರ್ಕಿಸಿದ್ದು, ಯಾವುದೇ ರೀತಿ ಭೀತಿಗೊಳಗಾಗದಿರುವಂತೆ ಧೈರ್ಯ ತುಂಬಿದೆ. ಅಲ್ಲದೆ ತಾವು ಹೇಳುವವರೆಗೆ ಯಾರೂ ಹಾಸ್ಟೆಲ್ ಬಿಟ್ಟು ತೆರಳಬಾರದು ಎಂದು ಸೂಚನೆ ನೀಡಿದೆ. ಆದಷ್ಟು ಶೀಘ್ರ ಸುರಕ್ಷಿತ ಸ್ಥಳಕ್ಕೆ ತಮ್ಮನ್ನು ಕರೆದೊಯ್ಯುವುದಾಗಿಯೂ ಹೇಳಿದೆ ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗೆಯಿಂದ ಪಡೀಲಿನ ಮನೆಯಲ್ಲಿರುವ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಕ್ಲಾಟನ್ ತಂದೆ ಮರ್ವಿನ್ ಡಿಸೋಜ ಹಾಗೂ ತಾಯಿ ಒಲಿನ್ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ನಾವು ಬೆಳಗ್ಗಿನಿಂದಲೂ ಪುತ್ರನ ಸಂಪರ್ಕದಲ್ಲಿದ್ದೇವೆ. ವೀಡಿಯೋ ಕಾಲ್ ಕರೆಯ ಮೂಲಕ ಆತ ಅಲ್ಲಿ ತಾನು ಸುರಕ್ಷಿತವಾಗಿದ್ದಾನೆಂದು ದೃಢಪಡಿಸಿದ್ದಾನೆ. ಅವನಿರುವ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಯಾವುದೇ ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಆದರೂ ಅಲ್ಲಿರು ಎಲ್ಲಾ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮಗೂ ನಮ್ಮ ಮಗ ಆದಷ್ಟು ಶೀಘ್ರ ನಮ್ಮ ಮನೆ ತಲುಪಬೇಕೆಂಬ ಆಸೆಯಿದೆ. ಭಾರತ ಸರಕಾರ ಭಾರತದ ಎಲ್ಲಾ ವಿದ್ಯಾರ್ಥಿಗಳನ್ನು ಶೀಘ್ರ ತಾಯ್ನಾಡಿಗೆ ಕರೆತರಬೇಕೆಂದು ಮನವಿ ಮಾಡಿಕೊಂಡ ಅವರು, ದ.ಕ.ಜಿಲ್ಲಾಡಳಿತ ಆದಷ್ಟು ಶೀಘ್ರ ಕ್ಲಾಟನ್ ಅನ್ನು ಕರೆತರುವ ಆಶ್ವಾಸನೆ ನೀಡಿದೆ ಎಂದು ಹೇಳಿದರು.