
ಅಮೇರಿಕಾದಲ್ಲಿ ಕಾಣಿಸಿಕೊಂಡ ವಿಶ್ವದಾಖಲೆಯ ಮಿಂಚು: ಇದರ ಉದ್ದ, ಅವಧಿ ಎಷ್ಟು ಗೊತ್ತೇ?
Tuesday, February 1, 2022
ಜಿನೀವಾ: ಎರಡು ವರ್ಷಗಳ ಹಿಂದೆ ಬಾನಂಚಿನಲ್ಲಿ ಮೂಡಿ ಮಾಯವಾಗಿದ್ದ ಮಿಂಚೊಂದರ ಉದ್ದ ಸುಮಾರು 770 ಕಿ.ಮೀ.ಗಳಷ್ಟಾಗಿತ್ತು ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ. ಇದೊಂದು ವಿಶ್ವ ದಾಖಲೆಯಾಗಿದೆ.
ಇದುವರೆಗೆ ಸಂಭವಿಸಿರುವ ಅತಿ ಉದ್ದದ ಮಿಂಚು ಇದಾಗಿದೆ ಎಂದು ತಿಳಿದು ಬಂದಿದೆ. 2020ರ ಎ.29ರಂದು ಇದರ ಉದ್ದವನ್ನು ಅಂದಾಜಿಸಲಾಗಿತ್ತು. ಈ ಮಿಂಚಿನ ಉದ್ದ 768 ಕಿ.ಮೀ.ಗಳಾಗಿದ್ದು, ಮಿಸಿಸಿಪ್ಪಿ, ಲೂಸಿಯಾನಾ ಹಾಗೂ ಟೆಕ್ಸಾಸ್‌ನಾದ್ಯಂತ ಈ ಸುದೀರ್ಘ ಮಿಂಚು ಕಂಡುಬಂದಿತ್ತು. ಈ ಮಿಂಚಿನ ಉದ್ದವು ನ್ಯೂಯಾರ್ಕ್ ಸಿಟಿ ಹಾಗೂ ಕೊಲಂಬಸ್, ಓಹಿಯೊ ನಡುವಿನ ಅಥವಾ ಲಂಡನ್ ಹಾಗೂ ಜರ್ಮನಿಯ ಹ್ಯಾಂಬರ್ಗ್ ನಡುವಿನ ಅಂತರಕ್ಕೆ ಸಮವಾಗಿತ್ತು ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆಯು (ಡಬ್ಲ್ಯುಎಂಓ) ತಿಳಿಸಿದೆ.
2018ರ ಅಕ್ಟೋಬರ್ 31ರಂದು ದಕ್ಷಿಣ ಬ್ರೆಝಿಲ್‌ನಲ್ಲಿ ಕಂಡುಬಂದಿದ್ದ ಅತಿ ಉದ್ದದ ಮಿಂಚುವಿಗಿಂತ ಈ ಮಿಂಚಿನ ಉದ್ದ ಸುಮಾರು 60 ಕಿ.ಮೀ.ಗಳಷ್ಟು ಉದ್ದವೆಂದು ಡಬ್ಲ್ಯುಎಂಓ ಸ್ಪಷ್ಟಪಡಿಸಿದೆ. ಅಲ್ಲದೆ ಇದು ಸುದೀರ್ಘ ಅವಧಿಯ ಮಿಂಚು ಎಂದೂ ವಿಶ್ವದಾಖಲೆ ನಿರ್ಮಿಸಿದೆ ಎಂದು ಹವಾಮಾನ ಮತ್ತು ಹವಾಗುಣ ವೈಪರೀತ್ಯಗಳ ಬಗೆಗಿನ ತಜ್ಞರ ಸಮಿತಿ ಹೇಳಿದೆ.
2020ರ ಜೂನ್ 18ರಂದು ಉರುಗ್ವೆ ಹಾಗೂ ಉತ್ತರ ಅರ್ಜೆಂಟೀನಾದಲ್ಲಿ ಕಂಡುಬಂದ ಮಿಂಚಿನ ಅವಧಿ 17.1 ಸೆಕೆಂಡ್ ಆಗಿದ್ದು, ಇದು ವಿಶ್ವದಾಖಲೆ ಎಂದು ಡಬ್ಲ್ಯುಎಂಓ ಹೇಳಿದೆ. ಈ ಹಿಂದೆ 2019ರ ಮಾರ್ಚ್ 4ರಂದು ಉತ್ತರ ಅರ್ಜೆಂಟೀನಾದಲ್ಲಿ ಕಂಡುಬಂದ ಸುದೀರ್ಘ ಅವಧಿಯ ಮಿಂಚಿಗಿಂತ ಇದು 0.37 ಸೆಕೆಂಡ್ ಅಧಿಕ ಎಂದು ಹೇಳಲಾಗಿದೆ.