
ಮಾಡೆಲಿಂಗ್ ಲೋಕದಲ್ಲಿ ಮಿಂಚುತ್ತಿರುವ ದಿನಗೂಲಿ ನೌಕರ: ಮಮ್ಮಿಕ್ಕನ ಸ್ಟೈಲಿಷ್ ಗೆ ನೆಟ್ಟಿಗರು ಫಿದಾ
Wednesday, February 16, 2022
ಕೇರಳ: ಅದೃಷ್ಟ ಒಮ್ಮೊಮ್ಮೆ ಕೆಲವರನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ಎಣಿಸಲು ಸಾಧ್ಯವಿಲ್ಲ. ಆ ಮೂಲಕ ಅವರ ಜೀವನದ ಪಥವೇ ಬದಲಾಗುತ್ತದೆ ಎಂಬುದು ಯಾರಿಗೂ ಊಹಿಸಲೂ ಸಾಧ್ಯವಿಲ್ಲ. ಹೀಗೊಂದು ಅದೃಷ್ಟ ಕೇರಳ ರಾಜ್ಯದ ಕೋಝಿಕ್ಕೋಡ್‌ನಲ್ಲಿರುವ 60 ವರ್ಷದ ಮಮ್ಮಿಕ್ಕ ಎಂಬ ದಿನಗೂಲಿ ಕಾರ್ಮಿಕನನ್ನು ಹುಡುಕಿಕೊಂಡು ಬಂದಿದೆ.
ಅದು ಹೇಗೆಂದರೆ, ಈ ದಿನಗೂಲಿ ನೌಕರ ಮಮ್ಮಿಕ್ಕ ಛಾಯಾಗ್ರಾಹಕ ಶಾರಿಕ್ ವಯಿಲ್ ಅವರ ಕಣ್ಣಿಗೆ ಬಿದ್ದಿದ್ದ. ಆ ಬಳಿಕ ಈತನ ಅದೃಷ್ಟ ಖುಲಾಯಿಸಿದೆ. ಇದೀಗ ಈ ಮಮ್ಮಿಕ್ಕ ಮಾಡೆಲ್ ಆಗಿ ಮಿಂಚುತ್ತಿದ್ದಾರೆ. ಮಮ್ಮಿಕ್ಕ ಇದೀಗ ತನ್ನ ಗ್ಲಾಮರಸ್ ಲುಕ್ ನಿಂದ ಇಂಟರ್ ನೆಟ್ ಲೋಕದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮಿಂಚುತ್ತಿದ್ದಾನೆ.
ಮಮ್ಮಿಕ್ಕನ ಇತ್ತೀಚಿನ ಫೋಟೋಶೂಟ್ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ದಿನಗೂಲಿ ನೌಕರನಿಂದ ಈತ ಮಾಡೆಲ್ ಆಗುವ ಮೇಕ್ ಓವರ್ ವೀಡಿಯೋ ಭಾರಿ ಜನಮೆಚ್ಚುಗೆಗೆ ಪಾತ್ರವಾಗಿದೆ.
ಸ್ಥಳೀಯ ಸಂಸ್ಥೆಯೊಂದರ ಪ್ರಚಾರಕ್ಕಾಗಿ ಮಮ್ಮಿಕ್ಕ ಇತ್ತೀಚೆಗೆ ಫೋಟೋಶೂಟ್ ವೊಂದರಲ್ಲಿ ಪಾಲ್ಗೊಂಡಿದ್ದು, ಇದರಲ್ಲಿ ಆತ ಕೈಯಲ್ಲಿ ಐಪ್ಯಾಡ್ ಹಿಡಿದುಕೊಂಡು, ಐಷಾರಾಮಿ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಛಾಯಾಗ್ರಾಹಕ ಶಾರಿಕ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಕಲಾವಿದ ಮಜ್ನಾಸ್ ಹಾಗೂ ಆಶಿಕ್ ಫುವಾದ್ ಮತ್ತು ಶಬೀಬ್ ವೈಲ್ ಮಮ್ಮಿಕ್ಕನ ಮೇಕ್ ಓವರ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಾಡೆಲ್ ಆಗಿರುವ ಕುರಿತು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳುವ ಮಮ್ಮಿಕ್ಕ ದಿನಗೂಲಿ ನೌಕರನಾಗಿ ಮುಂದುವರಿಯುತ್ತೇನೆ ಎಂದಿದ್ದಾರೆ.