ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನು ಸಾರ್ವಜನಿಕವಾಗಿ ಇರಿದು ಕೊಂದ ಆಟೊ ಡ್ರೈವರ್
Thursday, February 10, 2022
ಬೆಂಗಳೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನನ್ನೇ ಆಟೋ ಚಾಲಕನೋರ್ವನು ಸಾರ್ವಜನಿಕವಾಗಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ನರಸಿಂಹಸ್ವಾಮಿ ಲೇಔಟ್‌ನಲ್ಲಿ ನಡೆದಿದೆ.
ವಿದ್ಯಾರಣ್ಯಪುರ ನಿವಾಸಿ ವಿಶ್ವನಾಥ್ ಅಲಿಯಾಸ್ ಕುಳ್ಳ ವಿಶ್ವ(39) ಕೊಲೆಯಾದ ವ್ಯಕ್ತಿ. ಆರೋಪಿ ಆಟೋ ಚಾಲಕ ರವಿಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ರವಿಕುಮಾರ್ ಪತ್ನಿಯೊಂದಿಗೆ ವಿಶ್ವನಾಥ್ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂಬುದು ಗೊತ್ತಾಗಿದೆ. ವಿಶ್ವನಾಥ್ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ರವಿಕುಮಾರ್ ಹಾಗೂ ವಿಶ್ವನಾಥ್ ಸ್ನೇಹಿತರಾಗಿದ್ದರು. ವಿಶ್ವನಾಥ್ ಪತ್ನಿ, ಇಬ್ಬರು ಮಕ್ಕಳನ್ನು ತೊರೆದು ನಾಲ್ಕು ವರ್ಷಗಳಿಂದ ಪ್ರತ್ಯೇಕವಾಗಿ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ. ಈತ ವಕೀಲರೊಬ್ಬರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆರೋಪಿ ರವಿಕುಮಾರ್ ಎಂಬಾತ ಗಾಯತ್ರಿ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಈ ಮಧ್ಯೆ ವಿಶ್ವನಾಥ್ ಆಗಾಗ ರವಿಕುಮಾರ್ ಮನೆಗೆ ಬರುತ್ತಿದ್ದ. ಈ ಸಂದರ್ಭ ವಿಶ್ವನಾಥ್ ಆತನ ಪತ್ನಿ ಗಾಯತ್ರಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಮತ್ತೊಂದೆಡೆ ಆಕೆ ಮದ್ಯ ವ್ಯಸನಿಯಾಗಿದ್ದಳು. ಇತ್ತ ವಿಶ್ವನಾಥ್ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದು, ರವಿಕುಮಾರ್ ಇಲ್ಲದ ವೇಳೆ ಮನೆಗೆ ಬರುತ್ತಿದ್ದ.
ಈ ವಿಚಾರ ತಿಳಿದ ರವಿಕುಮಾರ್, ಸ್ನೇಹಿತ ಹಾಗೂ ಪತ್ನಿಗೆ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರು ಬದಲಾಗಿರಲಿಲ್ಲ. ಆತ ಆಕೆಯೊಂದಿಗೆ ಸಲುಗೆಯೊಂದಿಗೆ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ರವಿಕುಮಾರ್ ಮನೆಗೆ ಬಂದಿದ್ದ ವಿಶ್ವನಾಥ್, ಮದ್ಯದ ಅಮಲಿನಲ್ಲಿದ್ದ ಗಾಯತ್ರಿ ಜತೆ ಮಾತನಾಡುತ್ತಿದ್ದ. ಆಟೋ ಬಾಡಿಗೆಗೆಂದು ಹೊರಗಡೆ ಹೋಗಿದ್ದ ರವಿಕುಮಾರ್ ಕೂಡ ಅದೇ ವೇಳೆ ಬಂದಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಇವರ ನಡುವಿನ ವಾಗ್ವಾದ ವಿಕೋಪಕ್ಕೆ ಹೋಗಿದ್ದು, ರವಿಕುಮಾರ್ ಸಾರ್ವಜನಿಕವಾಗಿ ಚಾಕು ಹಾಗೂ ಬ್ಲೇಡ್‌ನಿಂದ ವಿಶ್ವನಾಥ್‌ನ ಕುತ್ತಿಗೆಗೆ ಇರಿದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.