
ಸುರತ್ಕಲ್: ಬಾಡಿಗೆ ಮನೆ ಖಾಲಿ ಮಾಡಿಸಲು ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Wednesday, February 2, 2022
ಮಂಗಳೂರು: ಬಾಡಿಗೆ ಮನೆ ಖಾಲಿ ಮಾಡಿಸಲು ಮಧ್ಯಸ್ಥಿಕೆ ವಹಿಸಿರುವ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ಇಂದು ನಗರದ ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ನಡೆದಿದೆ.
ಮಂಗಳೂರಿನ ಸುರತ್ಕಲ್ನ ಕಾಟಿಪಳ್ಳ ನಿವಾಸಿ ಮೊಹಮ್ಮದ್ ಅನಾಸ್ (29) ಹಲ್ಲೆಗೊಳಗಾದ ಯುವಕ. ಚಾರು, ರಾವೂಫ್, ಅಕ್ಕಿ, ಮುಸ್ತಾಫಾ ತಂಡದಿಂದ ಕೃತ್ಯ ಎಸಗಿರುವ ಆರೋಪಿಗಳು.
ಮೊಹಮ್ಮದ್ ಅನಾಸ್ ಚಾರು ಮತ್ತು ರವೂಫ್ ಎಂಬವರು ವಾಸವಿದ್ದ ಬಾಡಿಗೆ ಮನೆಯ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸಿದ್ದ. ಈ ಮಾತುಕತೆಯ ಸಂದರ್ಭದಲ್ಲಿ ಇವರ ನಡುವೆ ವೈಷಮ್ಯ ಬೆಳೆದಿತ್ತು. ಇದೇ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆ.
ಮೊಹಮ್ಮದ್ ಅನಾಸ್ ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅವರು ತಮ್ಮ ಪರಿಚಯದ ಅಬೂಬಕ್ಕರ್ ಎಂಬವರ ಮನೆಯ ಬಳಿ ಹೋಗಿದ್ದಾರೆ. ಆಗ ಗೇಟ್ ಬಳಿ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಚಾರು ಎಂಬಾತ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ. ಆಗ ಮೊಹಮ್ಮದ್ ಅನಾಸ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಚಾರು ಎಂಬಾತನ ತಂದೆ ರವೂಫ್, ಅಕ್ಕಿ, ಮುಸ್ತಫ ಯಾನೆ ಅಪ್ಪು ಮತ್ತು ಇತರರು ತಪ್ಪಿಸಿಕೊಳ್ಳದಂತೆ ಅಡ್ಡಗಟ್ಟಿ ತಲ್ವಾರು ಹಾಗೂ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಮೊಹಮ್ಮದ್ ಅನಾಸ್ ದೂರಿನಲ್ಲಿ ತಿಳಿಸಿದ್ದಾರೆ.
ಮಾರಣಾಂತಿಕ ಹಲ್ಲೆಯಲ್ಲಿ ಗಾಯಗೊಂಡಿರುವ ಮೊಹಮ್ಮದ್ ಅನಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.