ವ್ಯಕ್ತಿಯ ಹೊಟ್ಟೆಯೊಳಗಿತ್ತು ಗಾಜಿನ ಟೀ ಗ್ಲಾಸ್... ಆತನ ದೇಹದೊಳಗೆ ಅದು ಸೇರಿದ್ದು ಹೇಗೆಂದು ತಲೆಕೆಡಿಸಿಕೊಳ್ಳುತ್ತಿರುವ ವೈದ್ಯರು!
Tuesday, February 22, 2022
ಮುಜಾಫರ್‌ಪುರ (ಬಿಹಾರ): ಹೊಟ್ಟೆ ನೋವು ಹಾಗೂ ಮಲಬದ್ಧತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವನ ಹೊಟ್ಟೆಯ ಸ್ಕ್ಯಾನಿಂಗ್ ಮಾಡಿದ ಸಂದರ್ಭ ವೈದ್ಯರೇ ಶಾಕ್ ಆಗಿರುವ ಘಟನೆಯೊಂದು ಬಿಹಾರದ ಪುಜಾಫರ್‌ಪುರದ ಮಾದಿಪುರ ಪ್ರದೇಶದಲ್ಲಿ ನಡೆದಿದೆ. ಕಾರಣ ಈತನ ಹೊಟ್ಟೆಯಲ್ಲಿ ಅವರಿಗೆ ಗಾಜಿನ ಟಂಬ್ಲರ್ ಕಂಡಿದೆ.
ವೈಶಾಲಿ ಜಿಲ್ಲೆಯ ಮಹುವಾದ 55 ವರ್ಷದ ವ್ಯಕ್ತಿ ಹೊಟ್ಟೆನೋವು ಮತ್ತು ಮಲಬದ್ಧತೆಯೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ತಪಾಸಣೆ ಮಾಡಲು ಅವರಿಗೆ ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದಾಗ ಕರುಳಿನಲ್ಲಿ ವಸ್ತುವೊಂದು ಕಂಡಿದೆ. ಅದನ್ನು ಸರಿಯಾಗಿ ಪರಿಶೀಲನೆ ನಡೆಸಿದಾಗ ಅದು ಗಾಜಿನ ಟಂಬ್ಲರ್ ಎಂದು ತಿಳಿದು ಖುದ್ದು ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.
ಈ ವ್ಯಕ್ತಿಗೆ ಡಾ.ಮಖ್ದುಲುಲ್ ಹಕ್ ಎಂಬ ವೈದ್ಯರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಟಂಬ್ಲರ್ ತೆಗೆಯಲಾಗಿದೆ. ಆದರೆ ಅದು ಹೊಟ್ಟೆಯೊಳಕ್ಕೆ ಹೋದದ್ದು ಹೇಗೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ. ಆ ವ್ಯಕ್ತಿಯನ್ನು ಕೇಳಿದಾಗ ಆತ ತಾನು ಟೀ ಕುಡಿಯುವ ಸಂದರ್ಭದಲ್ಲಿ ಅದರ ಜೊತೆಗೆ ಗಾಜಿನ ಟಂಬ್ಲರ್ ಅನ್ನು ನುಂಗಿದ್ದೇನೆ ಎನ್ನುತ್ತಾನೆ. ಆದರೆ ಇದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯರು.
ಆತ ನೀಡಿರುವ ಕಾರಣವನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದು ಕಷ್ಟ. ಯಾರಾದರೂ ಈ ರೀತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿರುವ ಅವರು, ಗಾಜಿನ ಟಂಬ್ಲರ್ ಯಾವ ರೀತಿ ದೇಹದೊಳಗೆ ಸೇರಿತು ಎಂಬ ಬಗ್ಗೆ ಇನ್ನೂ ತಲೆಕೆಡಿಸಿಕೊಳ್ಳುತ್ತಿದ್ದಾರೆ. ವೈದ್ಯರ ಪ್ರಕಾರ, ಗಾಜಿನ ಟಂಬ್ಲರ್ ಈ ಭಾಗದಲ್ಲಿ ಸೇರಿಕೊಳ್ಳಲು ಇರುವ ಒಂದೇ ಒಂದು ಸಾಧ್ಯತೆ ಎಂದರೆ ಅದು ಗುದದ್ವಾರ ಒಂದೇ. ಮನುಷ್ಯನ ದೇಹ ರಚನೆಯ ಪ್ರಕಾರ ಗುದದ್ವಾರ ಬಿಟ್ಟು, ಬೇರೆ ಯಾವ ಭಾಗದಿಂದಲೂ ಹೊಟ್ಟೆಯ ಆ ಕರುಳಿನ ಭಾಗದಲ್ಲಿ ಯಾವ ವಸ್ತುವೂ ಸೇರಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ನಾವು ರೋಗಿಯಲ್ಲಿ ಇನ್ನಷ್ಟು ಕೇಳಿ ಅದನ್ನು ಬಹಿರಂಗಪಡಿಸಿದರೆ ಆತನ ಖಾಸಗೀತನಕ್ಕೆ ಧಕ್ಕೆ ಮಾಡಿದಂತೆ ಆಗುತ್ತದೆ. ವೈದ್ಯರಾಗಿ ನಾವು ಅವರ ಗೌಪ್ಯತೆಯನ್ನು ಕಾಪಾಡಬೇಕಾಗುತ್ತದೆ ಎಂದಿದ್ದಾರೆ.
ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಹೊಟ್ಟೆಯನ್ನೇ ಕೊಯ್ದು ಕರುಳಿನ ಭಾಗವನ್ನು ಬೇರ್ಪಡಿಸಿ ಟಂಬ್ಲರ್ ಅನ್ನು ಹೊರತೆಗೆಯಲಾಗಿದೆ. ಸದಯ ರೋಗಿಯು ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆರೋಗ್ಯವಾಗಿದ್ದಾನೆ. ಶಸ್ತ್ರಚಿಕಿತ್ಸೆಯ ಬಳಿಕ ಕೊಲೊನ್ ಅನ್ನು ಹೊಲಿಯಲಾಗುತ್ತದೆ. ರೋಗಿ ಚೇತರಿಸಿಕೊಳ್ಳಲು ಬಹಳ ಸಮಯ ಹಿಡಿಯಬಹುದು ಎಂದಿದ್ದಾರೆ ಡಾ. ಹಕ್.