
ತವರು ಮನೆಯ ಅರ್ಧ ಆಸ್ತಿ ನೀಡಿ, ಇಲ್ಲವಾದಲ್ಲಿ ನಗ್ನ ಫೋಟೋ ಶೇರ್ ಮಾಡುವುದಾಗಿ ಪತಿಯಿಂದಲೇ ಬೆದರಿಕೆ: ದೂರು ದಾಖಲು
Monday, February 28, 2022
ಬೆಂಗಳೂರು: ತವರು ಮನೆಯ ಅರ್ಧ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿ ವಿಚ್ಛೇದನ ನೀಡಬೇಕು. ಇಲ್ಲವಾದಲ್ಲಿ ತನ್ನಲ್ಲಿರುವ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಮಾನ ಹರಾಜು ಮಾಡುವುದಾಗಿ ಪತಿಯೇ ಪತ್ನಿಗೆ ಬೆದರಿಕೆಯೊಡ್ಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಲಕ್ಕಸಂದ್ರದ 26 ವರ್ಷದ ಸಂತ್ರಸ್ತ ಮಹಿಳೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹನುಮಂತನಗರದ ನಿವಾಸಿ, ಉದ್ಯಮಿ ಪ್ರಗತ್ ಪುರುಷೋತ್ತಮ್ (32) ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಆರೋಪಿ ಪ್ರಗತ್ ಪುರುಷೋತ್ತಮ್ ಸಂತ್ರಸ್ತ ಯುವತಿಯನ್ನು 2015ರಲ್ಲಿ ಮದುವೆಯಾಗಿದ್ದ. ವಿವಾಹದ ಸಂದರ್ಭದಲ್ಲಿ ವರದಕ್ಷಿಣೆಯಾಗಿ ಅರ್ಧ ಕೆ.ಜಿ.ಬಂಗಾರ, 15 ಕೆಜಿ ಬೆಳ್ಳಿ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಕೊಡಲಾಗಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆ ಬಳಿಕ ಆರೋಪಿ ಪತ್ನಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಈ ವಿಚಾರ ತಿಳಿದ ಆಕೆಯ ಪೋಷಕರು 40 ಲಕ್ಷ ರೂ. ಕೊಟ್ಟಿದ್ದರು.
ಇದರಿಂದಲೂ ತೃಪ್ತಿಯಾಗದ ಆರೋಪಿ ಮದ್ಯದ ಅಮಲಿನಲ್ಲಿ ಪತ್ನಿಗೆ ಹಲ್ಲೆ ನಡೆಸಿ, ಆಕೆಯ ನಗ್ನ ಫೋಟೋಗಳನ್ನು ತೆಗೆಯುತ್ತಿದ್ದ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ಬಳಿಕ ಆಕೆಯ ತವರು ಮನೆಯ ಅರ್ಧ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿ, ನಂತರ ತನಗೆ ವಿಚ್ಛೇದನ ಕೊಡಬೇಕು. ಇಲ್ಲವಾದರೆ ತನ್ನಲ್ಲಿರುವ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.