
ಮಂಗಳೂರಿನಲ್ಲಿ ವೈರಲ್ ಆಗುತ್ತಿರುವ ಹಿಜಾಬ್ - ಕೇಸರಿ ವಿವಾದದ ವಿದ್ಯಾರ್ಥಿಗಳ ವೀಡಿಯೋ ವೈರಲ್ ಸುಳ್ಳು ಸುದ್ದಿ: ಸ್ಪಷ್ಟನೆ ನೀಡಿದ ಪೊಲೀಸ್ ಆಯುಕ್ತರು
Tuesday, February 15, 2022
ಮಂಗಳೂರು: ನಗರದ ಖಾಸಗಿ ಕಾಲೇಜೊಂದರಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದದ ವಿದ್ಯಾರ್ಥಿಗಳ ನಡುವಿನ ಆಕ್ರೋಶವೆಂದು ಬಿಂಬಸಲಾಗುತ್ತಿರುವ ವೀಡಿಯೋ ವೈರಲ್ ಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಆಯುಕ್ತರು ಇದೊಂದು ಸುಳ್ಳು ಸುದ್ದಿಯೆಂದು ಸ್ಪಷ್ಟನೆ ನೀಡಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದಿರುವ ಘಟನೆಯೆಂದು ಕೇಸರಿ ಹಾಗೂ ಹಿಜಾಬ್ ವಿವಾದದ ಬಗ್ಗೆ ಇತ್ತಂಡಗಳ ವಿದ್ಯಾರ್ಥಿಗಳ ನಡುವಿನ ಘೋಷಣೆಯ ವೀಡಿಯೋವೊಂದು ವೈರಲ್ ಆಗುತ್ತಿತ್ತು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ತಕ್ಷಣ ಎಚ್ಚೆತ್ತ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಇದು ಸುಳ್ಳು ಸುದ್ದಿ. ಇಂತಹ ವದಂತಿಗಳನ್ನು ನಂಬದಿರಿ ಎಂದು ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಬೇರೆ ಎಲ್ಲೋ ನಡೆದಿರುವ ಹಳೆಯ ವೀಡಿಯೋವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದಿರುವ ಘಟನೆ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿತ್ತು. ಇದು ನಗರದ ಯಾವುದೇ ಕಾಲೇಜಿನ ವೀಡಿಯೋ ಅಲ್ಲ. ಈ ವೀಡಿಯೋದಲ್ಲಿ ನಡೆದಿರುವ ಘಟನೆ ತಮ್ಮ ಕಾಲೇಜಿನಲ್ಲಿ ನಡೆದಿರುವ ಕೃತ್ಯವಲ್ಲ. ಇದು ಸುಳ್ಳು ಸುದ್ದಿ ಎಂದು ಸ್ವತಃ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.
ನಗರದಲ್ಲಿ ಎಲ್ಲವೂ ಶಾಂತಿಯುತವಾಗಿ ಹೈಕೋರ್ಟ್ ಆದೇಶದ ಅನುಸಾರ ಎಲ್ಲರೂ ಸಹಕರಿಸುತ್ತಿದ್ದಾರೆ. ಈ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಪೊಲೀಸ್ ಆಯುಕ್ತ ಎನ್ . ಶಶಿಕುಮಾರ್ ತಿಳಿಸಿದ್ದಾರೆ.