ಪತಿ ಪಕ್ಕದ ಮನೆಯಾಕೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದರೆ, ಪತ್ನಿಯೇ ವೀಡಿಯೋ ಮಾಡಿದಳು: ವಿಜಯವಾಡದಲ್ಲೊಂದು ಹೇಯ ಕೃತ್ಯ
Thursday, February 10, 2022
ವಿಜಯವಾಡ: ಪತಿ ಪಕ್ಕದ ಮನೆಯಾಕೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದರೆ, ಪತ್ನಿಯೇ ಅದರ ವೀಡಿಯೋ ಮಾಡಿರುವ ಅಮಾನವೀಯ, ಹೇಯ ಕೃತ್ಯವೊಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ದಿಲೀಪ್ ಹಾಗೂ ತುಳಸಿ ದಂಪತಿ ಇಂಥದ್ದೊಂದು ಹೀನ ಕೃತ್ಯವನ್ನು ಎಸಗಿದವರು. ಸಂತ್ರಸ್ತೆಯ ಪತಿ ಕೆಲಸದ ನಿಮಿತ್ತ ಹೊರಹೋಗಿದ್ದರು. ಆದ್ದರಿಂದ ಆಕೆ ತನ್ನಿಬ್ಬರು ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಈ ಸಂದರ್ಭ ರಾತ್ರಿ 11 ಗಂಟೆಯ ಸುಮಾರಿಗೆ ದಿಲೀಪ್ ಮತ್ತು ತುಳಸಿ ದಂಪತಿ ಆಕೆಯ ಮನೆಯೊಳಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ.
ದಿಲೀಪ್ ಸಂತ್ರಸ್ತ ಮಹಿಳೆಯ ಬಾಯಿಯನ್ನು ಮುಚ್ಚಿ ತಮ್ಮ ಮನೆಗೆ ಎಳೆದೊಯ್ದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲಿಯೇ ಇದ್ದ ಆತನ ಪತ್ನಿ ತುಳಸಿ ಪತಿಯ ಕೃತ್ಯವನ್ನು ಖಂಡಿಸುವುದನ್ನು ಬಿಟ್ಟು ಪತಿ ರೇಪ್ ಮಾಡುವಾಗ ತಾನು ವೀಡಿಯೋ ಮಾಡಿದ್ದಾಳೆ.
ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಆರೋಪಿ ದಂಪತಿಗಳು ಜೀವ ಬೆದರಿಕೆ ಒಡ್ಡಿದ್ದಾರೆ. ಯಾರಲ್ಲಾದರೂ ಈ ವಿಚಾರ ಬಾಯಿಬಿಟ್ಟಲ್ಲಿ ಆಕೆಯ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪಾಪಿ ದಿಲೀಪ್ ತನ್ನ ಸ್ನೇಹಿತರೊಂದಿಗೂ ಮಹಿಳೆಯನ್ನು ಸಹಕರಿಸಲು ತಿಳಿಸಿದ್ದಾನೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನನ್ವಯ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.