
ಮಂಗಳೂರು: ಓಮಸತ್ವ, ಕಸ್ತೂರಿ ಮಾತ್ರೆ ಮಾರಾಟದ ವ್ಯಾಪಾರಿಯಿಂದ ಮಹಿಳೆಯ ಅತ್ಯಾಚಾರಕ್ಕೆ ಯತ್ನ; ಆರೋಪಿ ಅರೆಸ್ಟ್
Friday, February 4, 2022
ಮಂಗಳೂರು: ಓಮಸತ್ವ, ಕಸ್ತೂರಿ ಮಾತ್ರೆಗಳನ್ನು ಮಾರಾಟ ಮಾಡುವ ನೆಪದಲ್ಲಿ ಮನೆಗೆ ಬಂದಿರುವ ಕಾಮುಕ ಮಹಿಳೆಯ ಕೈಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ನಗರದ ಹೊರವಲಯದಲ್ಲಿರುವ ಕಂದಾವರ ಗ್ರಾಪಂನ ಕಜೆಪದವು ಎಂಬಲ್ಲಿ ನಡೆದಿದೆ.
ನಗರದ ಮುಲ್ಕಿಯ ಬಳಿಯ ಕೆಂಚನಕೆರೆ ನಿವಾಸಿ ಮೊಹಮದ್ ಇಕ್ಬಾಲ್ (52) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ.
ಆರೋಪಿ ಮೊಹಮ್ಮದ್ ಇಕ್ಬಾಲ್ ನಿನ್ನೆ ಬೆಳಗ್ಗೆ 11ಗಂಟೆ ಸುಮಾರಿಗೆ ನಗರದ ಕೊಳಂಬೆ ಗ್ರಾಮದ ಕಜೆಕೋಡಿ ಎಂಬಲ್ಲಿಗೆ ಓಮಸತ್ವ, ಕಸ್ತೂರಿ ಮಾತ್ರೆಗಳನ್ನು ಮಾರಾಟ ಮಾಡುತ್ತಾ ಬಂದಿದ್ದಾನೆ. ಈ ಸಂದರ್ಭ ಅಲ್ಲಿನ ನಿವಾಸಿ ಮಹಿಳೆಯೋರ್ವರನ್ನು ಕೈಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ತಕ್ಷಣ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಜಮಾಯಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.