
ರಾಜಸ್ಥಾನ: ಉದ್ಯೋಗ ಕೊಡಿಸಲಾಗುತ್ತದೆಂದು ಕರೆದೊಯ್ದು ಯುವತಿಯ ಮೇಲೆ ನಾಲ್ವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರ
Sunday, February 13, 2022
ಚುರು(ರಾಜಸ್ಥಾನ): ಉದ್ಯೋಗ ಕೊಡಿಸುವ ನೆಪದಲ್ಲಿ ನಾಲ್ವರು ಕಾಮುಕರು 22 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಕೃತ್ಯವೊಂದು ರಾಜಸ್ಥಾನದ ಚುರು ಎಂಬಲ್ಲಿ ನಡೆದಿದೆ.
ಅಸ್ಸಾಂ ಮೂಲದ ಯುವತಿಯನ್ನು ಆರೋಪಿಗಳಲ್ಲೋರ್ವ ಸುನಿಲ್ ಎಂಬಾತ ರಾಜಸ್ಥಾನದ ಚುರುಗೆ ಕರೆತಂದಿದ್ದನು. ಆತನ ಮಾತು ನಂಬಿದ ಯುವತಿ ಉದ್ಯೋಗ ಸಿಗುತ್ತದೆಂದು ಬಂದಿದ್ದಳು. ನಗರಕ್ಕೆ ಬರುತ್ತಿದ್ದಂತೆ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಆಕೆಯ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ದುಷ್ಕೃತ್ಯವೆಸಗಿದ ಬಳಿಕ ಸಂತ್ರಸ್ತೆಗೆ ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿರುವ ಆರೋಪಿಗಳು ಆಕೆಯ ಕೈಗಳನ್ನು ಕಟ್ಟಿ, ಕಟ್ಟಡದ ಮೇಲಿನಿಂದ ಕೆಳಗೆ ಎಸೆದಿದ್ದಾರೆ. ಅದೃಷ್ಟವಶಾತ್ ಕೈಗೆ ಕಟ್ಟಿದ್ದ ಹಗ್ಗ ಕಟ್ಟಡದ ಕಂಬಕ್ಕೆ ಸಿಲುಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕಟ್ಟಡದಲ್ಲಿ ಬಹಳ ಹೊತ್ತು ನೇತಾಡುತ್ತಿದ್ದ ಆಕೆಯನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಆಕೆಯ ರಕ್ಷಣೆ ಮಾಡಿ ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.