
ಅಪ್ರಾಪ್ತ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಪಾಪಿ ತಂದೆ ಅಂದರ್
Friday, February 4, 2022
ಶಿವಮೊಗ್ಗ: ಅಪ್ರಾಪ್ತ ಪುತ್ರಿಯನ್ನು ನಿರಂತರ ನಾಲ್ಕು ವರ್ಷಗಳಿಂದ ತಂದೆಯೇ ಅತ್ಯಾಚಾರ ಎಸಗಿರುವ ಹೇಯ ಕೃತ್ಯವೊಂದು ಶಿವಮೊಗ್ಗದ ಗೋವಿಂದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಪುತ್ರಿಯ ಸಂಕಟವನ್ನು ನೋಡಲಾರದೆ, ಪತಿಯ ಕೃತ್ಯ ತಡೆಯಲು ಸಾಧ್ಯವಾಗದೆ ಮಗಳೊಂದಿಗೆ ತಾಯಿ ಸಾವಿನ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗ್ರಾಮವೊಂದರ ಗೋಣಪ್ಪ(45) ಎಂಬಾತ ಈ ಅಮಾನುಷ ಕೃತ್ಯವೆಸಗಿರುವ ಆರೋಪಿ.
ತಂದೆ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದರೂ ಬಾಲಕಿ ಭಯದಿಂದ ಮೂರು ವರ್ಷ ಸುಮ್ಮನಿದ್ದಳು. ಆದರೆ, ಈತನ ಹೇಯ ಕೃತ್ಯವನ್ನು ಸಹಿಸಲಾಗದೆ ಒಂದು ದಿನ ಎಲ್ಲವನ್ನೂ ತಾಯಿಗೆ ವಿವರಿಸಿದ್ದಾಳೆ. ಆದರೆ ತಾಯಿಗೆ ಪತಿಯ ಕೃತ್ಯ ತಡೆಯಲು ಅನ್ಯ ಮಾರ್ಗ ಕಂಡಿಲ್ಲ. ಮಗಳಿಗೆ ಮದುವೆ ಮಾಡೋಣವೆಂದರೆ ಆಕೆಯಿನ್ನೂ ಅಪ್ರಾಪ್ತೆ. ಇನ್ನೊಂದೆಡೆ ಪತಿಯ ಪೈಶಾಚಿಕ ಕೃತ್ಯವನ್ನೂ ತಡೆಯಲಾರದೆ ಅಸಹಾಯಕತೆಯಿಂದ ಆಕೆ ಮಗಳೊಂದಿಗೆ ಆತ್ಮಹತ್ಯೆಗೆ ನಿರ್ಧರಿಸಿದ್ದಳು.
ಇದರ ನಡುವೆಯೇ ಪುತ್ರಿಗೆ 18 ವರ್ಷ ತುಂಬಲು ಕೆಲವೇ ದಿನಗಳು ಇರುವುದಿಂದ ಯುವಕನೋರ್ವನನ್ನು ಗೊತ್ತುಮಾಡಿ ನಿಶ್ಚಿತಾರ್ಥ ಮಾಡಿ ಮುಗಿಸಿದ್ದಳು. ಪುತ್ರಿಯ ನಿಶ್ಚಿತಾರ್ಥದಿಂದ ಇನ್ನಷ್ಟು ಕೆರಳಿದ ಗೋಣಪ್ಪ, ಮದುವೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಸಿದ್ದಾನೆ. ಈ ವಿಚಾರ ಯಾವುದೋ ರೀತಿ ಗೋವಿಂದಾಪುರದಲ್ಲಿರುವ ಮಹಿಳೆಯ ತವರು ಮನೆಯವರಿಗೆ ತಿಳಿದಿದೆ. ತಕ್ಷಣ ಅವರು ತಾಯಿ-ಮಗಳನ್ನು ಕರೆದುಕೊಂಡು ಹೋಗಿ ರಕ್ಷಣೆ ನೀಡಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಗೋಣಪ್ಪ ಗೋವಿಂದಾಪುರಕ್ಕೂ ಬಂದು ಗಲಾಟೆ ಮಾಡಿದ್ದಾನೆ. ಆತನ ಕೃತ್ಯದಿಂದ ಬೇಸತ್ತ ಅಲ್ಲಿನ ಗ್ರಾಮಸ್ಥರು ಆರೋಪಿಯನ್ನು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯ ಮೂಲಕ ದೂರನ್ನೂ ದಾಖಲಿಸಿದ್ದಾರೆ. ಇದೀಗ ಆತನ ವಿರುದ್ಧ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಗೆ ಸಾಂತ್ವನ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ಇನ್ನೊಂದೆಡೆ ಪತ್ನಿಯೊಂದಿಗೆ ಮನಸ್ತಾಪ ಹೊಂದಿದ್ದ ಗೋಣಪ್ಪ, ಪುತ್ರಿ ಜನಿಸಿದ ಬಳಿಕ ಆರು ವರ್ಷ ಪತ್ನಿಯಿಂದ ದೂರವೇ ಇದ್ದ. ತಾಯಿ-ಮಗಳು ಗೋವಿಂದಾಪುರದ ತವರು ಮನೆಯಲ್ಲೇ ಉಳಿದಿದ್ದರು. ಆ ಬಳಿಕ ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿ ಪತಿ-ಪತ್ನಿಯನ್ನು ಒಂದು ಮಾಡಿದ್ದರು. ಕೆಲ ವರ್ಷಗಳ ಬಳಿಕ ತನ್ನ ವರ್ತನೆ ಬದಲಿಸಿಕೊಂಡ ಗೋಣಪ್ಪ, ನೀನು ನನ್ನ ಮಗಳೇ ಅಲ್ಲ ಎಂದು ಹೇಳಿ ಅತ್ಯಾಚಾರವೆಸಗುವ ಜತೆಗೆ ದೈಹಿಕವಾಗಿಯೂ ಚಿತ್ರಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.