
ಅಪ್ರಾಪ್ತ ನಾದಿನಿಯನ್ನೇ ಗರ್ಭಿಣಿಯನ್ನಾಗಿಸಿದ ಭಾವ ಅರೆಸ್ಟ್
Sunday, February 6, 2022
ಶಿವಮೊಗ್ಗ: ನಾದಿನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಪ್ರಕರಣದಲ್ಲಿ ಭಾವನನ್ನು ಪೊಲೀಸರು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ತಾಲೂಕು ಕುಂಸಿ ಗ್ರಾಮ ನಿವಾಸಿ ಪ್ರವೀಣ್ ಬಂಧಿತ ಆರೋಪಿ.
ಪ್ರವೀಣ್ ಹೋಟೆಲೊಂದನ್ನು ನಡೆಸುಥತಿದ್ದನು. ವಿವಾಹವಾದ ಬಳಿಕ ಪತ್ನಿಯ ತಂಗಿಯನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡು ಓದಿಸುತ್ತಿದ್ದನು. ಆಕೆ ಕಳೆದ ಐದಾರು ವರ್ಷಗಳಿಂದ ಈತನ ಮನೆಯಲ್ಲಿಯೇ ಇದ್ದಳು. ಕಾಲಕ್ರಮೇಣ ಈತನಿಗೆ ಪತ್ನಿ ತಂಗಿಯ ಮೇಲೆ ಕಣ್ಣು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಕಳೆದ ಒಂದು ವರ್ಷದಿಂದ ನಾದಿನಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಆಕೆ ಹೊಟ್ಟೆ ನೋವೆಂದು ಹೇಳಿರುವ ಹಿನ್ನೆಲೆಯಲ್ಲಿ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಆಕೆ ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ. ಇದರಿಂದ ಹೆದರಿದ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಇದೀಗ ಆಕೆಗೆ ಎಂಟು ತಿಂಗಳಲ್ಲೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಅವಧಿಗೂ ಮುನ್ನ ಜನಿಸಿರುವ ಕಾರಣ ಮಗುವನ್ನು ಖಾಸಗಿ ಆಸ್ಪತ್ರೆಯಿಂದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತದೆ. ಆದರೆ ಆ ಬಳಿಕ ಮಗು ಮೃತಪಡುತ್ತದೆ.
ಆಸ್ಪತ್ರೆಗೆ ದಾಖಲಿಸಿರುವ ವೇಳೆ ಅಪ್ತಾಪ್ತೆಯ ವಯಸ್ಸು 19 ಎಂದು ದಾಖಲಿಸಲಾಗಿರುತ್ತದೆ. ಆಧಾರ್ ಸಂಖ್ಯೆಯನ್ನು ತಪ್ಪಾಗಿ ನೀಡಲಾಗಿರುತ್ತದೆ. ಆಸ್ಪತ್ರೆಯಲ್ಲಿ ಕೇವಲ ಒಂದೇ ದಿನಕ್ಕೆ ಮಗು ಮೃತಪಡುತ್ತದೆ. ಬಳಿಕ ಅಪ್ತಾಪ್ತೆಯೊಂದಿಗೆ ಪೋಷಕರು ಅಲ್ಲಿಂದ ಪರಾರಿಯಾಗುತ್ತಾರೆ. ಈ ಬಗ್ಗೆ ಆಸ್ಪತ್ರೆಯಿಂದ ಪೊಲೀಸ್ ದೂರು ದಾಖಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ತಪ್ಪು ವಿಳಾಸ ನೀಡಲಾಗಿರುತ್ತದೆ. ಆದರೂ ಪೊಲೀಸರು ವಿಳಾಸ ಪತ್ತೆ ಹಚ್ಚಿ ಸತ್ಯಾಂಶ ಬಯಲು ಮಾಡಿದ್ದಾರೆ. ಪ್ರವೀಣ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.