-->
ಮೈಸೂರು ಹೊಟೇಲ್ ಗೆ ಬಂದಿದ್ದಾಳೆ ರೋಬೊಟ್ ಸುಂದರಿ: ಸೀರೆಯುಟ್ಟು ಸಪ್ಲೈ ಮಾಡುವ ಈಕೆಯ ನೋಡಿ ಗ್ರಾಹಕರು ಫಿದಾ!

ಮೈಸೂರು ಹೊಟೇಲ್ ಗೆ ಬಂದಿದ್ದಾಳೆ ರೋಬೊಟ್ ಸುಂದರಿ: ಸೀರೆಯುಟ್ಟು ಸಪ್ಲೈ ಮಾಡುವ ಈಕೆಯ ನೋಡಿ ಗ್ರಾಹಕರು ಫಿದಾ!

ಮೈಸೂರು: ಹೊಟೇಲೊಂದರಲ್ಲಿ ಗ್ರಾಹಕರಿಗೆ ಬಗೆಬಗೆಯ ತಿಂಡಿ ತಿನಿಸುಗಳನ್ನು ಉಣಬಡಿಸಲೆಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ‘ರೋಬೋ ಸುಂದರಿ’ ಆಗಮಿಸಿದ್ದಾಳೆ. ನಗರದ ಶ್ರೀ ಜಯಚಾಮರಾಜೇಂದ್ರ ಒಡೆಯರ್​ ವೃತ್ತದ ಬಳಿಯಿರುವ ಸಿದ್ಧಾರ್ಥ ಹೋಟೆಲ್​ನಲ್ಲಿ ಫೆ.15ರಿಂದ ಈ  ರೋಬೊಟ್​ ಸುಂದರಿ ಕಾರ್ಯಾರಂಭ ಮಾಡಿದೆ. 

ಗ್ರಾಹಕರಿಗೆ ಸರ್ವ್​ ಮಾಡುವ ರೋಬಾಟ್​ಗಳು ಸದ್ಯ ಚೆನ್ನೈ, ಹೈದರಾಬಾದ್​, ಶಿವಮೊಗ್ಗದಲ್ಲಿ ಮಾತ್ರ ಇವೆ. ಇದೀಗ ಈ ರೋಬೊಟ್ ಅನ್ನು ಮೈಸೂರಿನಲ್ಲೂ ಕಾಣಲು ಸಾಧ್ಯ. ಈ ರೋಬೊಟ್​ ಸುಂದರಿಗೆ ಸೀರೆ ಉಡಿಸಿ ಮೈಸೂರು ಸಂಸ್ಕೃತಿಯ ಮೆರುಗು ನೀಡಿರುವುದು ವಿಶೇಷ. ಗ್ರಾಹಕರನ್ನು ಆಕರ್ಷಣೆ ಮಾಡಲು ಹಾಗೂ ಹೋಟೆಲ್​ ಉದ್ಯಮದಲ್ಲಿ ಎದುರಾಗುತ್ತಿರುವ ನೌಕರರ ಕೊರತೆಯನ್ನು ನೀಗಿಸಲು ಈ ರೋಬೋಟ್​ ಸಹಕಾರಿಯಾಗಿದೆ.

ಇದು ಬ್ಯಾಟರಿಚಾಲಿತ ರೋಬೊಟ್​ ಆಗಿದ್ದು, 4 ಗಂಟೆಗಳ ಕಾಲ ಚಾರ್ಚ್​ ಮಾಡಿದ್ದಲ್ಲಿ 8 ತಾಸು ಕಾರ್ಯನಿರ್ವಹಿಸುತ್ತದೆ. ಅಡುಗೆ ಕೊಠಡಿಯಿಂದ ಗ್ರಾಹಕರು ಕುಳಿತುಕೊಳ್ಳುವ ಪ್ರತೀ ಟೇಬಲ್​ಗಳಿಗೆ ಮ್ಯಾಗ್ನೆಟಿಕ್​ ಸ್ಟ್ರೆಪ್​ ಅನ್ನು  ಅಳವಡಿಸಲಾಗಿದೆ. ಈ ರೋಬೊಟ್ ಗರಿಷ್ಠ 10 ಕೆಜಿಯಷ್ಟು ತೂಕ ಹೊರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ರೋಬೊಟ್​ ಬಹುತೇಕ ಸಪ್ಲೆಯರ್​ ರೀತಿಯಲ್ಲಿಯೇ ಕಾರ್ಯನಿರ್ವಹಿಸುತ್ತದೆ. 

ಗ್ರಾಹಕರು ಹೋಟೆಲ್​ ಸಿಬ್ಬಂದಿ ಬಳಿ ಆರ್ಡರ್​ ಮಾಡಿರುವ ತಿಂಡಿ ತಿನಿಸುಗಳನ್ನು ರೋಬಾಟ್​ ಕೈಯಲ್ಲಿರುವ ಟ್ರೇ ಮೇಲೆ ಇಟ್ಟು ಟೇಬಲ್​ ಸಂಖ್ಯೆ ತಿಳಿಸಿದರೆ ನಿದಿರ್ಷ್ಟ ಟೇಬಲ್​ನ ಗ್ರಾಹಕರಿಗೆ ಸೇವೆ ನೀಡಲಿದೆ. ಟೇಬಲ್​ ಬಳಿ ರೋಬೊಟ್​ ಬಂದು ನಿಂತ ಬಳಿಕ ಗ್ರಾಹಕರೇ ತಾವು ಆರ್ಡರ್​ ಮಾಡಿರುವ ತಿಂಡಿ-ತಿನಿಸುಗಳನ್ನು ತೆಗೆದುಕೊಳ್ಳಬೇಕು. ಆರ್ಡರ್​ ಅನ್ನು ಹೋಟೆಲ್​ ಸಿಬ್ಬಂದಿ ತೆಗೆದುಕೊಳ್ಳುತ್ತಾರೆ. ರೋಬಾಟ್​ನಲ್ಲಿ ನಗರದ ಪ್ರೇಕ್ಷಣಿಯ ಸ್ಥಳ, ಅವುಗಳ ದೂರ, ಮೈಸೂರಿನ ಸಂಕ್ಷಿಪ್ತ ಇತಿಹಾಸ, ಹೋಟೆಲ್​ ಮೆನು ಸೇರಿದಂತೆ ಹಲವು ಮಾಹಿತಿಗಳನ್ನು ಅಳವಡಿಸಲಾಗಿದೆ. ರೋಬಾಟ್​ ಸಪ್ಲೆಯರ್​ ಅನ್ನು ಗ್ರಾಹಕರು ಕುತೂಹಲದಿಂದಲೇ​ ನೋಡುತ್ತಾ ಖುಷಿ ವ್ಯಕ್ತಪಡಿಸಿದ್ದಾರೆ. 

ಈ ಹೊಟೇಲ್ ಗೆ ಒಟ್ಟು 6 ರೋಬೊಟ್​ಗಳನ್ನು ತರಿಸುವ ಉದ್ದೇಶವಿದೆ. ಸದ್ಯಕ್ಕೆ ಒಂದನ್ನು ತರಿಸಿಕೊಳ್ಳಲಾಗಿದೆ. ಇದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ನೋಡಿ ಮತ್ತೆ ಹಂತ ಹಂತವಾಗಿ ಬೇರೆ ರೋಬೊಟ್ ಗಳನ್ನು ಖರೀದಿಸಲಾಗುತ್ತದೆ. ಒಂದು ರೋಬೊಟ್​ಗೆ 2.50 ಲಕ್ಷ ರೂ. ವೆಚ್ಚವಾಗಿದೆ ಎಂದು ಸಿದ್ಧಾರ್ಥ್ ಗ್ರೂಪ್ಸ್ ಅಧ್ಯಕ್ಷ  ಪಿ.ವಿ.ಗಿರಿ ಹೇಳುತ್ತಾರೆ.

Ads on article

Advertise in articles 1

advertising articles 2

Advertise under the article