
ಸೆಲ್ಫಿ ಹುಚ್ಚಾಟಕ್ಕೆ ರೈಲು ಹಳಿಯ ಮೇಲೆ ನಿಂತ ನಾಲ್ವರು ಯುವಕರು ರೈಲು ಹರಿದು ಸಾವು
Wednesday, February 16, 2022
ಗುರುಗ್ರಾಮ (ನವದೆಹಲಿ): ಸೆಲ್ಫಿಯ ಹುಚ್ಚುತನ ಅದೆಷ್ಟೋ ಮಂದಿಯ ಪ್ರಾಣವನ್ನೇ ಕಸಿದಿದೆ. ಈ ಬಗ್ಗೆ ಸಾಕಷ್ಟು ಸುದ್ದಿ ಪ್ರಕಟವಾದರೂ ಸೆಲ್ಫಿ ಪ್ರಿಯರು ಇನ್ನೂ ಎಚ್ಚೆತ್ತಿಲ್ಲ. ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಅಧಿಕ ಲೈಕ್ಸ್ ಪಡೆಯುವ ಹುಚ್ಚಾಟದಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಿದ್ದಾರೆ. ಇದೀಗ ಅಂಥಹದ್ದೇ ಒಂದು ದುರಂತ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
ಇಲ್ಲಿನ ರೈಲು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆಯುವ ದುಸ್ಸಾಹಸ ಮಾಡಲು ಹೋಗಿ ನಾಲ್ವರು ಯುವಕರು ಜೀವ ಕಳೆದುಕೊಂಡಿದ್ದಾರೆ. ದೇವಿಲಾಲ್ ಕಾಲನಿಯ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಹಾಗೂ ಯುವರಾಜ್ ಗೋಗಿಯಾ (18) ಮೃತಪಟ್ಟ ಯುವಕರು.
ಗುರುಗ್ರಾಮದ ನಿಲ್ದಾಣದಿಂದ ರೈಲು ಬಸಾಯಿ ನಿಲ್ದಾಣದ ಕಡೆಗೆ ಚಲಿಸುತ್ತಿದ್ದಾಗ ಈ ಘಟನೆ ಸಂಭವಿಸಿರುವುದಾಗಿ ಮೂಲಗಳು ಹೇಳಿವೆ. ಈ ನಾಲ್ವರು ಯುವಕರು ದೂರದಿಂದ ರೈಲು ಬರುತ್ತಿದ್ದಾಗಲೇ ಸೆಲ್ಫಿ ತೆಗೆದರೆ ಚೆನ್ನಾಗಿ ಬರುತ್ತದೆ ಎಂದು ಹಳಿಯ ಮೇಲೆ ನಿಂತು ಸೆಲ್ಫಿ ತೆಗೆಯಲು ಯತ್ನಿಸಿದ್ದಾರೆ. ಆದರೆ ದೆಹಲಿಯ ಸರಾಯ್ ರೋಹಿಲ್ಲಾದಿಂದ ರಾಜಸ್ಥಾನದ ಅಜ್ಮೀರ್‌ಗೆ ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ಅದೇ ಸಮಯಕ್ಕೆ ನಾಲ್ವರು ಯುವಕರ ಮೇಲೆಯೇ ಹರಿದು ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.