ಈ ಕುಟುಂಬದ ಮೇಲೆ ಅದೇನು ದ್ವೇಷವೋ..?: ಆಸ್ಪತ್ರೆಯಿಂದ ಹಿಂದಿರುತ್ತಿದ್ದಂತೆ ಮತ್ತೆ ಕುಟುಂಬಿಕರನ್ನೆಲ್ಲಾ ಕಚ್ಚುವ ನಾಗರಹಾವು!
Thursday, February 24, 2022
ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ವಲಯದ ಡೋರ್ನಕಂಬಾಲ ಎಂಬ ಪ್ರದೇಶದಲ್ಲಿ ಒಂದು ತಿಂಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರನ್ನು ಎರಡೆರಡು ಬಾರಿ ಹಾವೊಂದು ಕಚ್ಚಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ವೆಂಕಟೇಶ್ ಹಾಗೂ ವೆಂಕಟಮ್ಮ ದಂಪತಿಯ ಕುಟುಂಬಿಕರಿಗೆ ಹಾವಿನ ದ್ವೇಷದ ಸಮಸ್ಯೆ ಎದುರಾಗಿದೆ. ಈ ದಂಪತಿ ತಮ್ಮ ಮಗ ಜಗದೀಶ್ ನೊಂದಿಗೆ ವಾಸಿಸುತ್ತಿದೆ. ಆದರೆ ಅದೇನಾಗಿಯೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಇವರು ಮನೆಯಲ್ಲಿದ್ದ ಸಂದರ್ಭ ನಾಗರ ಹಾವೊಂದು ಬಂದು ಮೂವರನ್ನೂ ಕಚ್ಚಿದೆ. ತಕ್ಷಣ ಸ್ಥಳೀಯರು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದಾರೆ.
ಆದರೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುತ್ತಿದ್ದಂತೆ ಹಾವು ಮತ್ತೆ ಬಂದು ಎಲ್ಲರನ್ನೂ ಕಚ್ಚಿದೆ. ಮತ್ತೊಮ್ಮೆ ಎಲ್ಲರಿಗೂ ಚಿಕಿತ್ಸೆ ನೀಡಲಾಗಿತ್ತು. ಮತ್ತೆ ಮನೆಗೆ ಬಂದ ಸಂದರ್ಭ ಇದೇ ಸಮಸ್ಯೆ ಎದುರಾಗಿದೆ. ಇದೀಗ ಆಸ್ಪತ್ರೆಗೆ ಹೋಗಿ ಪ್ರಾಣ ಉಳಿಸಿಕೊಂಡಿರುವ ಕುಟುಂಬಸ್ಥರ ಸಂಕಟ ಹೇಳತೀರದಾಗಿದೆ.
ಕೃಷಿಕರಾಗಿರುವ ಈ ಕುಟುಂಬಸ್ಥರು ತಮ್ಮ ಕೃಷಿಭೂಮಿಯಲ್ಲಿ ನಾಗರಹಾವಿಗೆ ತೊಂದರೆ ಮಾಡಿರುವ ಕಾರಣ, ಈ ಸಮಸ್ಯೆ ಎದುರಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಆ ಹಾವು ಮಾತ್ರ ಕಣ್ಣಿಗೆ ಕಾಣಿಸಿಕೊಳ್ಳದೇ ಕಚ್ಚುತ್ತಿದೆ. ಇದೀಗ ಆ ಕುಟುಂಬ ಹಾವಿನ ಕಿರುಕುಳದಿಂದ ತಮಗೆ ಮುಕ್ತಿ ದೊರಕಿಸಿ ಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.