ಆಸ್ಟ್ರೇಲಿಯಾ ರಾಯಭಾರ ಕಚೇರಿ ಮಹಿಳಾ ಸ್ನಾನಗೃಹದಲ್ಲಿ ರಹಸ್ಯ ಕ್ಯಾಮರಾ ಪತ್ತೆ!
Sunday, February 6, 2022
ಬ್ಯಾಂಕಾಕ್: ಬ್ಯಾಂಕಾಕ್ ನಲ್ಲಿರುವ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ಮಹಿಳೆಯರ ಸ್ನಾನದ ಗೃಹದಲ್ಲಿ ಹಲವಾರು ಸ್ಪೈ (ರಹಸ್ಯ) ಕ್ಯಾಮೆರಾಗಳು ಪತ್ತೆಯಾಗಿದೆ. ಈ ಬಗ್ಗೆ ಕಚೇರಿಯ ಮಾಜಿ ಉದ್ಯೋಗಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ಹೇಳಿದ್ದಾರೆ.
ಇದೀಗ ಆರೋಪಿ ಮಾಜಿ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಥೈಲ್ಯಾಂಡ್ ಪೊಲೀಸ್ ಇಲಾಖೆ ದೃಢಪಡಿಸಿದೆ. ಜ.6ರಂದು ಆಸ್ಟ್ರೇಲಿಯಾ ರಾಯಭಾರ ಕಚೇರಿಯು ವ್ಯಕ್ತಿಯೋರ್ವನ ವಿರುದ್ಧ ದೂರು ದಾಖಲಿಸಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಥಾಯ್ಲಂಡ್ ಪೊಲೀಸ್ ವಿಭಾಗದ ಉನ್ನತ ಅಧಿಕಾರಿ ಖೆಮ್ಮರಿನ್ ಹಸ್ಸೀರಿ ಹೇಳಿದ್ದಾರೆ.
ಕ್ಯಾಮರಾದಲ್ಲಿನ ಎಸ್ಡಿ ಕಾರ್ಡ್ ಸ್ನಾನಗೃಹದ ನೆಲದ ಮೇಲೆ ಬಿದ್ದಿರುವುದನ್ನು ಕಂಡು ಪರಿಶೀಲನೆ ನಡೆಸಿದಾಗ ಸ್ಪೈಕ್ಯಾಮೆರಾ ಪತ್ತೆಯಾಗಿದೆ. ಎಷ್ಟು ಸಮಯದಿಂದ ಈ ಕ್ಯಾಮೆರಾ ಅಲ್ಲಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಗಂಭೀರ ಭದ್ರತಾ ಲೋಪದ ಪ್ರಕರಣವಾಗಿದೆ ಎಂದು ಆಸ್ಟ್ರೇಲಿಯಾದ ರಕ್ಷಣಾ ಮತ್ತು ವಿದೇಶ ಕಾರ್ಯನೀತಿ ತಜ್ಞರು ಹೇಳಿದ್ದಾರೆ. ಬಿಗಿ ಭದ್ರತೆಯಿರುವ ಪ್ರದೇಶದಲ್ಲಿ ಕ್ಯಾಮೆರಾದಂತಹ ಸಾಧನಗಳನ್ನು ಅಳವಡಿಸಲು ಸಾಧ್ಯ ಎಂದಾದಲ್ಲಿ ಇದು ಖಂಡಿತಾ ಗಂಭೀರ ಭದ್ರತಾ ಲೋಪ ಎಂದು ಆಸ್ಟ್ರೇಲಿಯಾ ನ್ಯಾಷನಲ್ ವಿವಿಯ ಪೆರೂಫೆಸರ್ ಹ್ಯೂ ವೈಟ್ ಹೇಳಿದ್ದಾರೆ.
ಕಚೇರಿಯ ಸಿಬ್ಬಂದಿಯ ಯೋಗಕ್ಷೇಮ ಹಾಗೂ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೆ ಈ ವಿಚಾರದಲ್ಲಿ ಸೂಕ್ತ ಬೆಂಬಲ ನೀಡುವುದನ್ನು ಮುಂದುವರಿಸಲಿದ್ದೇವೆ ಎಂದು ಆಸ್ಟ್ರೇಲಿಯಾದ ವಿದೇಶ ವ್ಯವಹಾರ ಇಲಾಖೆಯ ವಕ್ತಾರರು ಹೇಳಿದ್ದಾರೆ.