ಮದುವೆಯ ಖಯಾಲಿಯಿರುವ ಮುಖ್ಯಶಿಕ್ಷಕ ಸೇವೆಯಿಂದ ಅಮಾನತು: ಆರೋಪಿ ಪೊಲೀಸ್ ವಶಕ್ಕೆ
Wednesday, February 9, 2022
ಯಾದಗಿರಿ: ಮೂರು ಮದುವೆಯಾಗಿರುವ ಸರಕಾರಿ ಶಾಲೆಯ ಮುಖ್ಯ ಶಿಕ್ಷಕನೋರ್ವನ ಮದುವೆಯ ಖಯಾಲಿ ಬಹಿರಂಗಗೊಂಡು ಆತ ಸೇವೆಯಿಂದ ಅಮಾನತಗೊಂಡ ಘಟನೆ ಯಾದಗಿರಿ ಜಿಲ್ಲೆಯ ಸೈದಾಗಿರಿ ಎಂಬಲ್ಲಿ ನಡೆದಿದೆ. ಇದೀಗ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸೈದಾಪುರ ಹತ್ತಿರದ ನೀಲಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮೋಹನ ರೆಡ್ಡಿ ಸಂಗಾ ರೆಡ್ಡಿ ಮೂವರು ಮಹಿಳೆಯರ ಜೀವನದಲ್ಲಿ ಆಟವಾಡಿ ಇದೀಗ ಕಂಬಿ ಎಣಿಸುತ್ತಿರುವ ಆರೋಪಿ.
1988ರಲ್ಲಿ ಸುರಪುರ ತಾಲೂಕಿನ ಬೋನಾಳ ಗ್ರಾಮದ ತಿಪ್ಪಮ್ಮಳನ್ನು ಆರೋಪಿ ಮೋಹನ ರೆಡ್ಡಿ ಸಂಗಾ ರೆಡ್ಡಿ ವರಿಸಿದ್ದ. ಬಳಿಕ 1992ರಲ್ಲಿ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮ ನಿವಾಸಿ ದೇವಮ್ಮ ಎಂಬಾಕೆಯನ್ನು ಮದುವೆಯಾಗಿದ್ದಾನೆ. ಇಷ್ಟು ಸಾಲದೆಂಬಂತೆ 2007ರಲ್ಲಿ ವಿಜಯಪುರ ಜಿಲ್ಲೆಯ ತುಂಬಗಿ ಗ್ರಾಮದ ಗುರುಸಂಗಮ್ಮ ಎಂಬಾಕೆಯನ್ನು ವಿವಾಹವಾಗಿದ್ದಾನೆ.
ಅಚ್ಚರಿ ಎಂದರೆ, ಮೊದಲ ಇಬ್ಬರು ಪತ್ನಿಯರಿರುವಾಗಲೇ ಈತ ಮೂರನೇ ಮದುವೆಯಾಗಿದ್ದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗಷ್ಟೇ 2ನೇ ಪತ್ನಿ ದೇವಮ್ಮನಿಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಲು ಆರೋಪಿ ಮುಂದಾಗಿದ್ದ. ಆಕೆ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದೇ ತಡ ಆರೋಪಿ ಮೋಹನ ರೆಡ್ಡಿ ಸಂಗಾ ರೆಡ್ಡಿ ತಾನು ಮತ್ತೊಂದು ಮದುವೆಯಾಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಹೀಗಾಗಿ ಮೊದಲ ಇಬ್ಬರೂ ಪತ್ನಿಯರು ತಮಗೆ ಪತಿ ಮೋಸ ಮಾಡಿದ್ದಾಗಿ ಹೇಳಿ ನ್ಯಾಯ ದೊರಕಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ. ವಿಚಾರಣೆ ನಡೆಸಿರುವ ಡಿಡಿಪಿಐ ಶಾಂತಗೌಡ ಪಾಟೀಲ್, ಶಿಕ್ಷಕ ಮೋಹನ ರೆಡ್ಡಿ ಮೂರು ಮದುವೆಯಾಗಿದ್ದನ್ನು ಖಚಿತಪಡಿಸಿಕೊಂಡು ಆತನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಆ ಬಳಿಕ ಪತ್ನಿಯರಿಬ್ಬರು ಪತಿಯಿಂದಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅಲ್ಲದೆ ಯಾದಗಿರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿಯವರಿಗೂ ದೂರು ನೀಡಿದ್ದಾರೆ.
ಸೈದಾಪುರ ಪೊಲೀಸ್ ಠಾಣೆಯಲ್ಲಿ ಮೋಹನರೆಡ್ಡಿ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.