
ಮಾವನನ್ನು ಹೊರಹಾಕಲು ತಂತ್ರ - ಮಂತ್ರದ ಮೊರೆಹೋದ ಸೊಸೆ ಮನೆಗೇ ಕನ್ನ ಹಾಕಿದಳು!
Sunday, February 6, 2022
ಹೊನ್ನಾಳಿ: ಮಾವನನ್ನು ಮನೆಯಿಂದ ಹೊರಹಾಕಲು ಜ್ಯೋತಿಷಿಯ ಮೊರೆ ಹೋದ ಸೊಸೆಯೋರ್ವಳು ಮಂತ್ರ-ತಂತ್ರದ ವೆಚ್ಚಕ್ಕೆ ಹಣ ಹೊಂದಾಣಿಕೆ ಮಾಡಲು ಸ್ವಂತ ಮನೆಗೇ ಕನ್ನ ಹಾಕಿ ಜೈಲು ಪಾಲಾದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ.
ಈ ಸಂಪೂರ್ಣ ಕೃತ್ಯದ ರೂವಾರಿ ಹೊನ್ನಾಳಿಯ ವಿನುತಾ. ಈಕೆ ತನ್ನ ಉದ್ದೇಶ ಈಡೇರಿಕೆಗಾಗಿ ತನ್ನ ಮನೆಯನ್ನೇ ದರೋಡೆ ನಡೆಸಿರುವಾಕೆ.
ಫೆ.1ರಂದು ಸಂಜೆ ಪಟ್ಟಣದ ಟಿ.ಬಿ.ವೃತ್ತ ಸಮೀಪದ ಮನೆಗೆ ನುಗ್ಗಿರುವ ಮೂವರು ದುಷ್ಕರ್ವಿುಗಳು ಮನೆಮಂದಿಗೆ ಚಾಕು ತೋರಿಸಿ ಹೆದರಿಸಿ 170 ಗ್ರಾಂ. ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ವಿನುತಾ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಠಾಣೆಯ ಸಮೀಪವೇ ಹಾಡಹಗಲೇ ದರೋಡೆ ಕೃತ್ಯ ನಡೆದಿದೆ ಎಂಬ ಕಾರಣಕ್ಕಾಗಿ ಪ್ರಕರಣ ಬೇಧಿಸಲು 10 ಜನರ ತಂಡ ರಚಿಸಲಾಗಿತ್ತು.
ಆದರೆ ತನಿಖೆಯ ವೇಳೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ದೂರು ನೀಡಿರುವ ಮಹಿಳೆಯೇ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಸತ್ಯ ಮರೆಮಾಚಲು ಕತೆ ಕಟ್ಟಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಆ ಬಳಿಕ ಈ ಬಗ್ಗೆ ಒಪ್ಪಿಕೊಂಡ ಆಕೆ ‘ನಮ್ಮ ಮಾವ ನಮಗೆ ಕಿರುಕುಳ ನೀಡುತ್ತಿದ್ದರು. ಅವರು ತನ್ನ ಸಣ್ಣ ಮಗನ ಮನೆಗೆ ಹೋಗುವಂತಾಗಬೇಕು. ಇದಕ್ಕಾಗಿ ಸಹಾಯ ಮಾಡುವಂತೆ ಜ್ಯೋತಿಷಿ ಸಂಪತ್ ಕುಮಾರ್ ರನ್ನು ಕೇಳಿಕೊಂಡಿದ್ದೆ. ಅವರು ಅದಕ್ಕಾಗಿ 2.50 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅದಕ್ಕಾಗಿ ಮನೆಯಲಿದ್ದ ಒಡವೆಗಳನ್ನು ಜ್ಯೋತಿಷಿಗೆ ಕೊಡುತ್ತ ಬಂದೆ. ಅಮಾವಾಸ್ಯೆಯ ದಿನ ಮತ್ತೆ ನನಗೆ ಫೋನ್ ಮಾಡಿರುವ ಸಂಪತ್ ಕುಮಾರ್ ಬಾಕಿ ಹಣ ಕೊಡಿ, ಇಲ್ಲದಿದ್ದರೆ ನಿಮಗೆ ಕೆಟ್ಟದಾಗುತ್ತದೆ ಎಂದು ಹೆದರಿಸಿದ್ದರು.
ಇದರಿಂದ ಅನಿವಾರ್ಯವಾಗಿ ಮಾವ ಇಟ್ಟಿದ್ದ 50 ಸಾವಿರ ರೂ. ಹಾಗೂ ಬಂಗಾರದ ಒಡವೆಗಳನ್ನು ದರೋಡೆ ಕೃತ್ಯದ ನಾಟಕವಾಡಿ ಜ್ಯೋತಿಷಿಗೆ ನೀಡಿದ್ದೇನೆಂದು ವಿಚಾರಣೆ ವೇಳೆ ವಿನುತಾ ಒಪ್ಪಿಕೊಂಡಿದ್ದಾರೆ. ಇದೀಗ ಪೊಲೀಸರು ವಿನುತಾ ಹಾಗೂ ಜ್ಯೋತಿಷಿ ಸಂಪತ್ ಕುಮಾರ್ ಇಬ್ಬರನ್ನೂ ಬಂಧಿಸಿದ್ದಾರೆ. ಹಾಡಹಗಲೇ ನಡೆದಿರುವ ದರೋಡೆ ಕೃತ್ಯವನ್ನು ಪೊಲೀಸರು ಸವಾಲಾಗಿ ಸ್ವೀಕರಿಸಿ ನಾಲ್ಕೇ ದಿನಗಳಲ್ಲಿ ಭೇದಿಸಿದ್ದಾರೆ.