
ಮದುವೆಗೆ ಬಂದು ವಧುವಿನೊಂದಿಗೆ ಫೋಟೋ ಕ್ಲಿಕ್ಕಿಸಿ ಹಣ, ಚಿನ್ನಾಭರಣದ ಬ್ಯಾಗ್‌ನೊಂದಿಗೆ ಖದೀಮ ಕಳ್ಳ ಪರಾರಿ
Tuesday, February 15, 2022
ಗ್ವಾಲಿಯರ್ (ಮಧ್ಯಪ್ರದೇಶ): ಕೋವಿಡ್ ಸೋಂಕು ಹರಡದಂತೆ ಮಾಸ್ಕ್ ಧರಿಸಿ ಎಂದು ಸರ್ಕಾರ ಸೂಚನೆ ನೀಡಿದೆ. ಆದರೆ ಅದೇ ಮಾಸ್ಕ್ ಅನ್ನು ಯಾವ ರೀತಿ ದುರುಪಯೋಗ ಮಾಡಿಕೊಳ್ಳಬಹುದು ಎಂದು ಈ ಖದೀಮ ಕಳ್ಳರು ತೋರಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಾಸ್ಕ್ ಧರಿಸಿ ಬಂದಿರುವ ಕಳ್ಳನೋರ್ವನು ಮೊದಲು ವಧುವಿನೊಂದಿಗೆ ಫೋಟೋ ತೆಗೆಸಿಕೊಂಡಿದ್ದಾನೆ. ಬಳಿಕ ವಧುವಿನ ಪಕ್ಕದಲ್ಲಿದ್ದ ನಗದು, ಆಭರಣಗಳ ಬ್ಯಾಗ್ ಅನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಲು ಬಲೆ ಬೀಸಿದ್ದಾರೆ. ಅಂದ ಹಾಗೆ ಕಳೆದ 15 ದಿನಗಳಲ್ಲಿ ಗ್ವಾಲಿಯರ್‌ನಲ್ಲಿ ನಡೆದಿರುವ ಈ ರೀತಿಯ ಮೂರನೇ ಪ್ರಕರಣವಿದು.
ಶನಿವಾರ ರಾತ್ರಿ ಗ್ವಾಲಿಯರ್‌ನ ಸಂಗಮ್ ವಾಟಿಕ ಮದುವೆ ಸಭಾಂಗಣದಲ್ಲಿ ವಿವಾಹ ಸಮಾರಂಭವೊಂದು ನಡೆದಿತ್ತು. ಆಗ ಅಲ್ಲಿಗೆ ಮಾಸ್ಕ್ ಧರಿಸಿ ಕಳ್ಳನೋರ್ವನು ಬಂದಿದ್ದಾನೆ. ತೀರಾ ಆತ್ಮೀಯನೆಂಬಂತೆ ನಟಿಸುತ್ತ ವಧುವಿನ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾನೆ. ಇದೇ ವೇಳೆ ಅಲ್ಲೇ ಪಕ್ಕದಲ್ಲಿದ್ದ ಬ್ಯಾಗನ್ನು ಎತ್ತಿ ವಧುವಿನ ಕುರ್ಚಿಯ ಹಿಂದಿಟ್ಟಿದ್ದಾನೆ. ಆ ಬ್ಯಾಗ್ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಡ್ಡಿಯಾಗುತ್ತದೆ ಎನ್ನುವಂತೆ ಆತ ಹಾವಭಾವ ಮಾಡಿದ್ದಾನೆ. ಆ ಬಳಿಕ ಆತ ನಿಧಾನಕ್ಕೆ ಬ್ಯಾಗ್ ಎತ್ತಿಕೊಂಡು ಆರಾಮವಾಗಿ ಮದುವೆ ಮಂಟಪ ದಾಟಿ ಹೊರಹೋಗಿದ್ದಾನೆ. ಆಮೇಲೆ ನೀಡಿರುವ ದೂರಿನ ಪ್ರಕಾರ ಆ ಬ್ಯಾಗ್‌ನಲ್ಲಿ 1 ಲಕ್ಷ ರೂ. ನಗದು, 2 ಲಕ್ಷ ರೂ. ಮೌಲ್ಯದ ಆಭರಣವಿದ್ದದ್ದು ಗೊತ್ತಾಗಿದೆ. ಇದೀಗ ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.