
ಬೈಕ್ ಕೊಡಿಸದ ಪತ್ನಿ ತವರು ಮನೆಯವರು: ತ್ರಿವಳಿ ತಲಾಖ್ ನೀಡಿ ಹೆಂಡತಿಯನ್ನು ಹೊರ ಹಾಕಿದ ಪತಿ ಮಹಾಶಯ!
Monday, February 28, 2022
ಹಲ್‌ದ್ವಾನಿ (ಉತ್ತರಾಖಂಡ) : ಕೇಂದ್ರದ ಮೋದಿ ಸರಕಾರ ತ್ರಿವಳಿ ತಲಾಖ್ ಅನ್ನು ರದ್ದು ಪಡಿಸಿ ಎರಡು ವರ್ಷಗಳಾಗುತ್ತಾ ಬಂದರೂ ಇನ್ನೂ ಕೆಲವೊಂದು ಕಡೆಗಳಲ್ಲಿ ತ್ರಿವಳಿ ತಲಾಖ್ ಸುದ್ದಿಯಾಗುತ್ತಲೇ ಇದೆ. ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಪತ್ನಿಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ದಾಂಪತ್ಯ ಸಂಬಂಧವನ್ನು ಕಳಚಿಕೊಳ್ಳುತ್ತಿರುವ ಪದ್ಧತಿಯಿಂದ ಅದೆಷ್ಟೋ ಮಹಿಳೆಯರ ಜೀವನ ನರಕವಾಗಿದೆ. ಇದೀಗ ಅಂಥಹದ್ದೇ ಒಂದು ಘಟನೆ ಉತ್ತರಾಖಂಡದ ಹಲ್‌ದ್ವಾನಿ ಎಂಬಲ್ಲಿ ನಡೆದಿದೆ.
ತುಂಬು ಗರ್ಭಿಣಿಗೆ ಪತಿ ಮಹಾಶಯನೊಬ್ಬ ತ್ರಿವಳಿ ತಲಾಖ್ ನೀಡಿದ್ದಾನೆ. ಅದೂ ಆಕೆಗೆ ತವರು ಮನೆಯಿಂದ ಬೈಕ್ ಕೊಡಿಸುವಂತೆ ಕೇಳಿರುವ ಪತಿ, ಅದನ್ನು ಕೊಡಿಸಲು ಪತ್ನಿಯ ಮನೆಯವರಿಗೆ ಸಾಧ್ಯವಾಗದ್ದರಿಂದ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾನೆ. 2021ರ ಮೇ 14ರಂದು ನಾಯ್ ಬಸ್ತಿಯ ತಾಜ್ ಮಸೀದಿ ಬಳಿಯ ನಿವಾಸಿ ಅಬ್ದುಲ್ ಖಾದಿರ್ ಎಂಬಾತನೊಂದಿಗೆ ಬಂಭುಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯ ವಿವಾಹ ನೆರವೇರಿತ್ತು. ಮದುವೆಯಾದ ಬೆನ್ನಲೇ ಆಕೆ ಗರ್ಭಿಣಿಯಾಗಿದ್ದಾಳೆ. ಇದೀಗ ಎಂಟು ತಿಂಗಳ ಗರ್ಭಿಣಿಗೆ ಈ ದುಃಸ್ಥಿತಿ ಬಂದಿದೆ.
ಬೈಕ್ ಕೊಡಿಸದೇ ಹೋದಲ್ಲಿ ಗರ್ಭಪಾತ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಬೈಕ್ ಕೊಡಿಸಲು ಪತ್ನಿಯ ಮನೆಯವರಿಗೆ ಸಾಧ್ಯವಾಗಿರಲಿಲ್ಲ. ಗರ್ಭಪಾತಕ್ಕೆ ಆಕೆ ಒಪ್ಪದಾಗ ತ್ರಿವಳಿ ತಲಾಖ್ ನೀಡಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಇದೀಗ ಆಕೆಯ ತವರು ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪತಿ ಹಾಗೂ ಆತನ ಪಾಲಕರು ಸೇರಿದಂತೆ ಆಕೆಯ ಅತ್ತೆಯ ಕುಟುಂಬದ ಆರು ಜನರ ವಿರುದ್ಧ ಪೊಲೀಸರು ತ್ರಿವಳಿ ತಲಾಖ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.