ಮನೆಗೆಲಸಕ್ಕೆ ಬಂದ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರಗೈದ ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
Thursday, March 24, 2022
ಮಂಗಳೂರು: ನಿರಂತರವಾಗಿ ಒಂದು ವರ್ಷದಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗುತ್ತಿದ್ದ ಯುವಕನೋರ್ವನ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2ನೇ ತ್ವರಿತಗತಿ ವಿಶೇಷ ಪೊಕ್ಸೊ ನ್ಯಾಯಾಲಯ ಆರೋಪಿಗೆ 10 ವರ್ಷ ಕಠಿಣ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಬೊಳ್ಳರ ಮಜಲು ಮನೆಯ ಪ್ರಸಾದ್ (31) ಶಿಕ್ಷೆಗೊಳಗಾದ ಅಪರಾಧಿ. 2018ರ ಜು. 28ರಂದು ಪ್ರಸಾದ್ ಮನೆಗೆ ಸಂಬಂಧಿಕಳಾಗಿರುವ 17 ವರ್ಷದ ಬಾಲಕಿ ಮನೆ ಕೆಲಸಕ್ಕಾಗಿ ಬಂದಿದ್ದಳು. ಅಪ್ರಾಪ್ತೆಯೊಂದಿಗೆ ಸಲಿಗೆ ಬೆಳೆಸಿಕೊಂಡ ಪ್ರಸಾದ್ ಆಕೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದನು. ಆ ಬಳಿಕವು ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು.
ಆಕೆ ಈತನ ಕೃತ್ಯವನ್ನು ಪ್ರತಿಭಟಿಸಿದ ಸಂದರ್ಭ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದ. ಈ ವಿಚಾರ ಬಾಲಕಿಯ ತಾಯಿ ಮತ್ತು ಸಹೋದರನಿಗೆ ತಿಳಿದ ಬಳಿಕ ಅವರು ಬಾಲಕಿಯ ಮೂಲಕ 2019ರ ಜೂ.13ರಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಆರೋಪಿ ಪ್ರಸಾದ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಇನ್ಸ್‌ಪೆಕ್ಟರ್‌ಗಳಾದ ಮಂಜುನಾಥ್ ಡಿ. ಮತ್ತು ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸೆಷನ್ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ರಾಧಾಕೃಷ್ಣ ವಿಚಾರಣೆ ನಡೆಸಿದ್ದು, ಆರೋಪಿ ಮೇಲಿನ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆಯ 6 ರನ್ವಯ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದ್ದಲ್ಲಿ ಮತ್ತೆ 2 ತಿಂಗಳ ಸಜೆ, ಐಪಿಸಿ ಸೆ.506 (ಕೊಲೆ ಬೆದರಿಕೆ) ಅನ್ವಯ 1 ವರ್ಷ ಸಜೆ, ಐಪಿಸಿ ಸೆಕ್ಷನ್ 323 (ಹಲ್ಲೆ) ಅನ್ವಯ 6 ತಿಂಗಳ ಸಜೆ ವಿಧಿಸಲಾಗಿದೆ.ಈ 3 ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿದೆ. ಬಾಲಕಿಗೆ ಸರ್ಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ದೊರಕಿಸಿ ಕೊಡುವಂತೆಯೂ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದ ಮಂಡಿಸಿದರು.