
1,400 ದೂರ ಬೈಕ್ ನಲ್ಲಿ ಕ್ರಮಿಸಿ ಪುತ್ರನನ್ನು ಕರೆತಂದ ರಜಿಯಾ ಬೇಗಂ ಮತ್ತೆ ಸುದ್ದಿಯಲ್ಲಿ: ಆಗ ಕೊರೊನಾ ಲಾಕ್ ಡೌನ್, ಈಗ ಯುಕ್ರೇನ್ ಯುದ್ಧ
Saturday, March 5, 2022
ತೆಲಂಗಾಣ: ಕೋವಿಡ್ ಮೊದಲ ಅಲೆಯ 2020ರ ಮಾರ್ಚ್ ನಲ್ಲಿ, ತೆಲಂಗಾಣ ರಾಜ್ಯದ ರಜಿಯಾ ಬೇಗಂ ಎಂಬ ಮಹಿಳೆ ಭಾರೀ ಕಾರಣಕ್ಕೆ ಸುದ್ದಿಯಾಗಿದ್ದರು. ಕಾರಣವೇನೆಂದರೆ, ಲಾಕ್ಡೌನ್ ಸಮಯದಲ್ಲಿ ಸಾರಿಗೆ ಸೌಕರ್ಯ ಇಲ್ಲದ ಪರಿಣಾಮ ಈಕೆಯ ಪುತ್ರ ನಿಜಾಮುದ್ದೀನ್ ಅಮಾನ್ ನೆಲ್ಲೂರಿನಲ್ಲಿ ಸಿಲುಕಿದ್ದ. ಈತನನ್ನು ಕರೆದುಕೊಂಡು ಸಲುವಾಗಿ ರಜಿಯಾ ಬೇಗಂ 1,400 ಕಿ.ಮೀ ದೂರ ಬೈಕ್ನಲ್ಲಿ ಹೋಗಿ ಸುದ್ದಿಯಾಗಿದ್ದರು.
ಈಕೆ ಸಾಕಷ್ಟು ದೂರ ಬೈಕ್ ನಲ್ಲಿ ಕ್ರಮಿಸಿರುವ ಬಗ್ಗೆ ಬಹಳಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದ್ದರೂ ಸುದ್ದಿ ಮಾತ್ರ ಬಹಳ ವೈರಲ್ ಆಗಿತ್ತು. ಇದೀಗ ಅದೇ ರಜಿಯಾ ಬೇಗಂ ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ, ಯೂಕ್ರೇನ್ನಲ್ಲಿ ಆಕೆಯ 19 ವರ್ಷದ ಪುತ್ರ ನಿಜಾಮುದಿನ್ ಅಮಾನ್ ಸಿಲುಕಿದ್ದಾನೆ. ಆಗ ಕೋವಿಡ್ ಲಾಕ್ ಡೌನ್ ನಲ್ಲಿ ಸಿಲುಕಿದ್ದ ಪುತ್ರ ಇದೀಗ ಯುದ್ಧಪೀಡಿತ ಯೂಕ್ರೇನ್ನಲ್ಲಿ ಸಿಲುಕಿದ್ದಾನೆ. ಆತ ಇದುವರೆಗೆ ಭಾರತಕ್ಕೆ ಮರಳಿಲ್ಲ.
ತೆಲಂಗಾಣದ ನಿಜಾಮಾಬಾದ್‌ನಲ್ಲಿ ಶಿಕ್ಷಕಿಯಾಗಿರುವ ರಜಿಯಾ, ಸಿಎಂ ಕೆ. ಚಂದ್ರಶೇಖರ್ ರಾವ್, ಗೃಹ ಸಚಿವ ಮೊಹಮ್ಮದ್ ಅಲಿ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮಗನನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಈಶಾನ್ಯ ಯೂಕ್ರೇನ್‌ನಲ್ಲಿರುವ ಸುಮಿ ಎಂಬ ಪ್ರದೇಶದಲ್ಲಿ ತಮ್ಮ ಪುತ್ರ ಇರುವುದಾಗಿ ರಜಿಯಾ ಬೇಗಂ ಹೇಳಿಕೊಂಡಿದ್ದಾರೆ.
ಇತರ ಭಾರತೀಯ ವಿದ್ಯಾರ್ಥಿಗಳೊಂದಿಗೆ ತನ್ನ ಪುತ್ರನನ್ನೂ ರಕ್ಷಿಸುವಂತೆ ರಜಿಯಾ ಬೇಗಂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿಕೊಂಡಿದ್ದಾರೆ. 15 ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿರುವ ರಜಿಯಾ, ಇರುವ ಒಬ್ಬನೇ ಮಗನಿಗಾಗಿ ಕಣ್ಣೀರಿಡುತ್ತಿದ್ದಾರೆ.