
ಮಾಜಿ ಕಾರ್ಪೊರೇಟರ್ ಕಾಮದಾಟ, ಹೇಯ ಕೃತ್ಯಕ್ಕೆ 18ರ ಯುವತಿ ಬಲಿ: ಮೊಬೈಲ್ ನಲ್ಲಿದ್ದ ರಹಸ್ಯದಿಂದ ಪ್ರಕರಣ ಬಯಲು
Thursday, March 10, 2022
ತುಮಕೂರು: ಹೊಟ್ಟೆ ನೋವಿನಿಂದ ಬಳಲುತ್ತಿದ್ದ 18ರ ಬಾಲೆಯೊಬ್ಬಳು 2021ರ ನವೆಂಬರ್ 8 ರಂದು ಮೃತಪಟ್ಟಿದ್ದಳು. ಇದೀಗ ಆಕೆಯ ಮೊಬೈಲ್ನಲ್ಲಿದ್ದ ರಹಸ್ಯದಿಂದ ಈ ಪ್ರಕರಣಕ್ಕೆ ಸ್ಫೋಟಕ ತಿರುವು ದೊರಕಿದೆ. ಈಕೆಯ ಸಾವಿಗೆ ತುಮಕೂರಿನ ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯ ರಾಜೇಂದ್ರ ಕುಮಾರ್ನ ಕಾಮದಾಟ, ಹೇಯ ಕೃತ್ಯವೇ ಕಾರಣ ಎಂದು ತಿಳಿದು ಬಂದಿದೆ. ಮೃತ ಯುವತಿಯ ತಾಯಿ ದೂರಿನನ್ವಯ ಪೊಲೀಸರು ರಾಜೇಂದ್ರ ಕುಮಾರ್ ನನ್ನು ಬಂಧಿಸಿದ್ದಾರೆ.
ಗ್ರೆಸ್ ಪ್ರೀರ್ತನಾ ಎಂಬ ಯುವತಿ ರಾಜೇಂದ್ರ ಕುಮಾರ್ ನ ಕಾಮದಾಟಕ್ಕೆ ಬಲಿಯಾದವಳು. ಗ್ರೆಸ್ ಪ್ರೀರ್ತನಾ ಹಾಗೂ ಆಕೆಯ ತಾಯಿ ಸಂತೋಷ್ ಸ್ಟೆಲ್ಲಾ ತುಮಕೂರಿನ ನಗರದಲ್ಲಿ ನಿವಾಸಿಯಾಗಿದ್ದರು. ತುಮಕೂರಿನ ಸಿ.ಎಸ್.ಐ. ವೆಸ್ಲಿ ಚರ್ಚ್ನಲ್ಲಿ ಸಭಾಪಾಲನ ಸದಸ್ಯನಾಗಿದ್ದ ರಾಜೇಂದ್ರಕುಮಾರ್, 2013- 2018ರ ಅವಧಿಯಲ್ಲಿ ತುಮಕೂರು ಪಾಲಿಕೆಯ ಕಾರ್ಪೊರೇಟರ್ ಆಗಿದ್ದ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈತ ತುಮಕೂರಿನ ಡಿಸಿ ಕಚೇರಿ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಸಂತೋಷ್ ಸ್ಟೆಲ್ಲಾಗೆ 5 ವರ್ಷಗಳ ಹಿಂದೆ ರಾಜೇಂದ್ರ ಕುಮಾರ್ ನ ಪರಿಚಯವಾಗಿತ್ತು. ತನ್ನನ್ನು ಚರ್ಚ್ ಕಮಿಟಿ ಸದಸ್ಯನೆಂದು ಹೇಳಿಕೊಂಡಿದ್ದ ರಾಜೇಂದ್ರ ಕುಮಾರ್, ಕೊರೊನಾ ಲಾಕ್ಡೌನ್ ಸಂದರ್ಭ ಆಹಾರ ಸಾಮಗ್ರಿ ಕಿಟ್ ನೀಡುವ ನೆಪದಲ್ಲಿ ಸ್ಟೆಲ್ಲಾ ಮನೆಗೆ ಭೇಟಿ ನೀಡಿದ್ದ.
ಈ ಸಂದರ್ಭ ಮನೆಯಲ್ಲಿ ತಾಯಿ-ಮಗಳು ಇಬ್ಬರೇ ಇರುವುದ ತಿಳಿದುಕೊಂಡಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಂದ್ರ ಕುಮಾರ್, ಸಹಾಯ ಮಾಡುವ ನೆಪದಲ್ಲಿ ಸಲುಗೆ ಬೆಳೆಸಿಕೊಂಡಿದ್ದ. ಸಂತೋಷ್ ಸ್ಟೆಲ್ಲಾ ತಿಳಿಯದಂತೆ ಆಕೆಯ ಪುತ್ರಿಯನ್ನು ಪುಸಲಾಯಿಸಿ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಅಲ್ಲದೆ ಪದೇ ಪದೆ ಗರ್ಭಪಾತದ ಮಾತ್ರೆಯನ್ನೂ ಕೊಡುತ್ತಿದ್ದ. 2021ರ ಅಕ್ಟೋಬರ್ನಲ್ಲಿ ಯುವತಿ ಗ್ರೇಸ್ ಪ್ರೀರ್ತನಾಗೆ ಅಸಹಜ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ತುಮಕೂರಿನ ಎರಡ್ಮೂರು ಆಸ್ಪತ್ರೆಗೆ ಗ್ರೆಸ್ ಪ್ರೀರ್ತನಾಳನ್ನು ಕರೆದೊಯ್ದ ರಾಜೇಂದ್ರಕುಮಾರ್ ಅಲ್ಲಿ ಚಿಕಿತ್ಸೆ ಕೊಡಿಸಿದ್ದ. ಈ ಸಂದರ್ಭ ಸಂತೋಷ್ ಸ್ಟೆಲ್ಲಾ ಕೂಡ ಜೊತೆಗೆ ಹೋಗಿದ್ದರೂ ಆಕೆಯನ್ನು ಆಸ್ಪತ್ರೆಯ ಹೊರಗಿರುವಂತೆ ರಾಜೇಂದ್ರ ಸೂಚಿಸಿದ್ದ. ಆದ್ದರಿಂದ ಪುತ್ರಿಗೆ ಏನಾಗಿದೆ ಎಂದು ಸ್ಟೆಲ್ಲಾಗೆ ಅರಿವೇ ಇರಲಿಲ್ಲ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಪುತ್ರಿಯ ಬಳಿ ಏನಾಗಿದೆ ಎಂದು ತಾಯಿ ಕೇಳಿದಾಗ ಪುತ್ರಿ ಸತ್ಯ ಬಾಯ್ಬಿಟ್ಟಿದ್ದಾಳೆ.
ಇಷ್ಟಕ್ಕೆಲ್ಲಾ ರಾಜೇಂದ್ರಕುಮಾರ್ ನೇ ಕಾರಣ. ತನ್ನನ್ನು ಆತನ ಆಫೀಸ್ಗೆ ಕರೆದೊಯ್ದು ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ ಎರಡರ ಮೂರು ಬಾರಿ ಅಬಾರ್ಷನ್ ಕೂಡಾ ಮಾಡಿಸಿದ್ದ. ಜೊತೆಗೆ ಗರ್ಭಪಾತ ಆಗಲೆಂದು ಪದೇ ಪದೆ ಮಾತ್ರೆ ನುಂಗಿಸಿದ್ದರು ಎಂದು ಕಣ್ಣೀರಿಟ್ಟಿದ್ದಳು. ಆದರೆ 2021ರ ನವೆಂಬರ್ 8ರಂದು ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಳು. ಈಕೆಯ ಮೃತದೇಹವನ್ನು ತುಮಕೂರಿಗೆ ತೆಗೆದುಕೊಂಡು ಹೋಗಲು ತಾಯಿಗೆ ಅವಕಾಶ ಕೊಡದ ರಾಜೇಂದ್ರಪ್ರಸಾದ್, ಬೆಂಗಳೂರಿನ ಶಾಂತಿನಗರದ ಬಳಿ ಇರುವ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ.
ಇದೀಗ ಪುತ್ರಿಯ ಮೊಬೈಲ್ ಪರಿಶೀಲಿಸಿದ ತಾಯಿಗೆ ಅದರಲ್ಲಿ ಹಲವು ರಹಸ್ಯ ಗೊತ್ತಾಗಿದೆ. ಪುತ್ರಿಯೊಂದಿಗೆ ರಾಜೇಂದ್ರಕುಮಾರ್ ಮಾತನಾಡಿದ್ದ ಆಡಿಯೋ ರೆಕಾರ್ಡ್, ಫೋಟೋ, ವೀಡಿಯೋ ಪತ್ತೆಯಾಗಿದೆ. ಇದನ್ನು ಸಾಕ್ಷಿಯಾಗಿಟ್ಟುಕೊಂಡು ಪುತ್ರಿಯ ಸಾವಿನ ಬಗ್ಗೆ ಪ್ರಶ್ನಿಸಿದ ತಾಯಿಗೆ ರಾಜೇಂದ್ರಕುಮಾರ್ ಜೀವ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ. ಪುತ್ರಿ ಸಾವು ಸಹಜವಲ್ಲ, ಅದು ಕೊಲೆ ಎಂದು ಶಂಕಿಸಿ ತುಮಕೂರು ನಗರ ಪೊಲೀಸರಿಗೆ ಮಾ.8ರಂದು ತಾಯಿ ಸಂತೋಷ್ ಸ್ಟೆಲ್ಲಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಜೇಂದ್ರಕುಮಾರ್ನನ್ನು ಬಂಧಿಸಿದ್ದಾರೆ