ಅಪರಿಚಿತನಲ್ಲಿ ಎಟಿಎಂನಲ್ಲಿ ಹಣ ಡ್ರಾ ಮಾಡಲು ಕಾರ್ಡ್ ನೀಡಿ ಫಜೀತಿಗೆ ಸಿಲುಕಿಕೊಂಡ ವ್ಯಕ್ತಿ: 19 ಸಾವಿರ ರೂ. ಕಳೆದುಕೊಂಡು ಠಾಣೆ ಮೆಟ್ಟಿಲೇರಿದರು!
Friday, March 25, 2022
ಕೊಳ್ಳೇಗಾಲ: ಎಟಿಎಂ ಉಪಯೋಗಿಸಲು ಬಾರದಿದ್ದ ವ್ಯಕ್ತಿ ಅಪರಿಚಿತನಲ್ಲಿ ಕಾರ್ಡ್ ಕೊಟ್ಟು ಹಣ ಡ್ರಾ ಮಾಡಲು ಹೇಳಿ ವಂಚನೆಗೊಳಗಾದ ಘಟನೆ ಕೊಳ್ಳೇಗಾಲದದಲ್ಲಿ ನಡೆದಿದೆ.
ಕೊಳ್ಳೇಗಾಲದ ಕೆನರಾ ಬ್ಯಾಂಕ್ ಎಟಿಎಂಗೆ 2-3 ದಿನಗಳ ಹಿಂದೆ ಜಾಗೇರಿ ಗ್ರಾಮದ ಶೇಶುರಾಜ್ ಎಂಬವರು ಹಣ ಡ್ರಾ ಮಾಡಲು ಹೋಗಿದ್ದಾರೆ. ಆದರೆ ಅವರಿಗೆ ಎಟಿಎಂ ಬಳಕೆ ಮಾಡಲು ಬಾರದಿದ್ದ ಹಿನ್ನೆಲೆಯಲ್ಲಿ ಅಲ್ಲೇ ಇದ್ದ ಅಪರಿಚಿತನ ಕೈಗೆ ಕಾರ್ಡ್ ನೀಡಿ 500 ರೂ. ಡ್ರಾ ಮಾಡಿಕೊಡಲು ಹೇಳಿದ್ದಾರೆ. ಅದರಂತೆ ಆತ ಹಣ ಡ್ರಾ ಮಾಡಿ ನೀಡಿದ್ದು, ಇವರು ಪಡೆದು ಕೊಂಡು ಮನೆಗೆ ಬಂದಿದ್ದಾರೆ.
ಆದರೆ ಅದಾಗಿ ಒಂದು ದಿನದ ಬಳಿಕ ಶೇಶುರಾಜ್ ಖಾತೆಯಿಂದ 19 ಸಾವಿರ ರೂ. ಡ್ರಾ ಆಗಿರುವ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿದೆ. ತನ್ನ ಬಳಿಯೇ ಎಟಿಎಂ ಕಾರ್ಡ್ ಇದ್ದರೂ ಹೇಗೆ ಹಣ ಯಾವ ರೀತಿ ಡ್ರಾ ಆಗಿದೆ ಎಂದು ಶೇಶುರಾಜ್ಗೆ ಆಶ್ಚರ್ಯವಾಗಿದೆ. ತಕ್ಷಣ ಅವರು ತಮ್ಮ ಎಟಿಎಂ ಕಾರ್ಡ್ ಪರಿಶೀಲನೆ ನಡೆಸಿದಾಗ ಅದು ಬೇರೆ ಎಟಿಎಂ ಕಾರ್ಡ್ ತನ್ನದಲ್ಲ ಎಂದು ಗೊತ್ತಾಗಿದೆ.
ಈ ಹಿಂದೆ ಯಾರ ಕೈಗೆ ಎಟಿಎಂ ಕಾರ್ಡ್ ಕೊಟ್ಟಿದ್ದೆ ಎಂದು ಜ್ಞಾಪಿಸಿದ್ದಾರೆ. ಆಗ ಈ ವಿಚಾರ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಾ.24ರಂದು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶೇಶುರಾಜ್ ದೂರು ದಾಖಲಿಸಿದ್ದಾರೆ. 2-3 ದಿನಗಳ ಹಿಂದೆ ಎಟಿಎಂಗೆ ತೆರಳಿ 500 ರೂ. ತೆಗೆದುಕೊಡೋಕೆ ಎಂದು ಅಪರಿಚಿತನಲ್ಲಿ ಕಾರ್ಡ್ ಕೊಟ್ಟಿದ್ದೆ. ಆಗ ಅವನು ನನ್ನ ಕಾರ್ಡ್ ಬದಲಾಯಿಸಿ ಬೇರೆ ಕಾರ್ಡ್ ಕೊಟ್ಟಿದ್ದಾನೆ. ಇದೀಗ ಒಂದು ದಿನದ ಬಳಿಕ ಯಳಂದೂರಿನ ಎಟಿಎಂವೊಂದರಲ್ಲಿ 19 ಸಾವಿರ ರೂ.ಡ್ರಾ ಮಾಡಿದ್ದಾನೆ. ಅವನನ್ನು ಹುಡುಕಿ ಹಣ ವಾಪಸ್ ಕೊಡಿಸಿ ಎಂದು ದೂರು ನೀಡಿದ್ದಾರೆ.