-->
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆದಿತ್ಯ ರಾವ್ ಗೆ 20 ವರ್ಷ ಕಾರಾಗೃಹ ಶಿಕ್ಷೆ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆದಿತ್ಯ ರಾವ್ ಗೆ 20 ವರ್ಷ ಕಾರಾಗೃಹ ಶಿಕ್ಷೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಮೇಲಿರುವ ಆರೋಪ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅನ್ವಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ, ದಂಡ ತೆರಲು ಸಾಧ್ಯವಾಗದಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಸೆಕ್ಷನ್ 16ರ ಅನ್ವಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ, ದಂಡ ತೆರಲು ಸಾಧ್ಯವಾಗದಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ತೀರ್ಪು ವಿಧಿಸಿ ಆದೇಶಿಸಿದ್ದಾರೆ. ಅಪರಾಧಿ ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು.

2020ರ ಜನವರಿ 20ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿ ಆದಿತ್ಯ ರಾವ್ ಸ್ಪೋಟಕ ಸಾಮಾಗ್ರಿಗಳನ್ನು ಇರಿಸಿದ್ದ. ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಶಂಕಾಸ್ಪದ ಸ್ಪೋಟಕ ಸಾಮಾಗ್ರಿಗಳನ್ನು ಅಂದೇ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಎಂಬಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಎಫ್ಎಸ್ಎಲ್ ವರದಿಯಲ್ಲಿ ಇದು ಸ್ಪೋಟಕ ಸಾಮಾಗ್ರಿ ಎಂದು ಸಾಬೀತಾಗಿತ್ತು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದಂತೆ ಆದಿತ್ಯ ರಾವ್ 2020ರ ಜ.22ರಂದು ತಾನೇ ಬಾಂಬ್ ಇರಿಸಿರುವುದಾಗಿ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗಿದ್ದ. 

ಈ ಬಗ್ಗೆ ತನಿಖಾಧಿಕಾರಿಗಳು ಆರೋಪಿಯ ವಿರುದ್ಧ 700 ಪುಟಗಳ ದೋಷಾರೋಪಣ ಪಟ್ಟಿಯನ್ನು ಮಂಗಳೂರಿನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಇದೀಗ ಆದಿತ್ಯ ರಾವ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು.

Ads on article

Advertise in articles 1

advertising articles 2

Advertise under the article